ಭಲೇ ! ರಾಜ್ಯಪಾಲರಿಗೆ ಲಂಚ ಕಳಿಸಿದ ಉಪನ್ಯಾಸಕ

Lecturer sends Bribe to Karnataka Governor
ಹಾಸನ, ಅ.14: ಕಾಲೇಜಿನಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸುವಂತೆ ರಾಜ್ಯಪಾಲರಿಗೆ ಉಪನ್ಯಾಸಕ ಜಯಂತ್ ಪತ್ರ ಬರೆಯುತ್ತಾರೆ . ಆದರೆ, ಡಜನ್ ಗಟ್ಟಲೆ ಪತ್ರ ಬರೆದರೂ ಉತ್ತರ ಬರದಿದ್ದಾಗ ಲಂಚ ರೂಪದಲ್ಲಿ 1 ಲಕ್ಷ ಚೆಕ್ ಕಳುಹಿಸಿದ್ದಾರೆ.

ಪತ್ರ ಬಂದಾಗ ಸುಮ್ಮನಿದ್ದ ರಾಜಭವನ, ಚೆಕ್ ಬಂದಾಗ ತಕ್ಷಣ ಎಚ್ಚೆತ್ತುಕೊಂಡು ವಿಷಯವನ್ನು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಎಚ್.ಯು. ತಳವಾರ್ ಅವರಿಗೆ ತಿಳಿಸಿದೆ. ಸಹಾಯ ನಿರೀಕ್ಷೆಯಲ್ಲಿದ್ದ ಉಪನ್ಯಾಸಕ ಜಯಂತ್ ಅವರನ್ನು ಇಲಾಖೆ ಕೂಡಲೇ ಅಮಾನತು ಆದೇಶ ಹೊರಡಿಸಿದೆ.

'ಸೂಕ್ತ ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ಸುಮಾರು 13 ಬಾರಿ ಪತ್ರ ಬರೆದಿದ್ದೆ.ಆದರೆ ಉತ್ತರ ಬರಲಿಲ್ಲ. ಹೀಗಾಗಿ 1 ಲಕ್ಷ ರು ಚೆಕ್ ಕಳಿಸಿ ಅದನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗೆ ತಲುಪಿಸುವಂತೆ ಕೋರಿದೆ. ಈ ರೀತಿಯಾದರೂ ನನ್ನ ಅಕ್ರಮ ವರ್ಗಾವಣೆ ನಿಲ್ಲುತ್ತದೆ ಎಂಬ ಆಶಯವಿತ್ತು 'ಎಂದು ಪಾಲಿಟೆಕ್ನಿಕ್ ಕಾಲೇಜಿನ ಅಮಾನತುಗೊಂಡ ಉಪನ್ಯಾಸಕ ಬಿವಿ ಜಯಂತ್ ಹೇಳಿದ್ದಾರೆ.

ಚಿಕ್ಕಮಗಳೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜಯಂತ್, ಕಾಲೇಜಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಆದರೆ ಯಾವುದೇ ತನಿಖೆ ನಡೆಸಲು ಮುಂದಾಗದ ಅಧಿಕಾರಿಗಳ ಕ್ರಮದಿಂದ ಬೇಸತ್ತಿದ್ದರು. ನಂತರ ಲೋಕಾಯುಕ್ತರಿಗೂ ದೂರು ನೀಡಿದರು.

ಕಾಲೇಜಿನಲ್ಲಿ ನಡೆದ ಅವ್ಯವಹಾರ ಮಾತ್ರವಲ್ಲದೇ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆಳೆಯಲು ಮುಂದಾಗಿದ್ದು ಜಯಂತ್ ಗೆ ಮುಳುವಾಯಿತು.

2008ರಲ್ಲಿ ಬಯೋಮೆಟ್ರಿಕ್ ಯಂತ್ರ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆಯೂ ತನಿಖೆ ನಡೆಸುವಂತೆ ದಾಖಲೆ ಸಹಿತ ದೂರು ನೀಡಿದರು. ಪ್ರಯೋಜನ ಆಗದೆ ಜ.30 ರಂದು ರಾಜ್ಯಪಾಲರಿಗೂ ಎಲ್ಲಾ ದಾಖಲೆ ಸಹಿತ ದೂರು ಸಲ್ಲಿಸಿದರು. ಆಡಳಿತ ಸುಧಾರಣಾ ಇಲಾಖೆಗೆ ದೂರು ವರ್ಗಾಯಿಸಿ ರಾಜ್ಯಪಾಲರು ಸುಮ್ಮನಾದರು.

ಈ ನಡುವೆ ಜಯಂತ್ ಚಿಕ್ಕಮಗಳೂರಿನಿಂದ ಬೀದರ್‌ಗೆ ವರ್ಗಾವಣೆಗೊಂಡರು. ಕೆಎಟಿಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಜಯಂತ್ ಅವರನ್ನು ಹಾಸನದ ಶ್ರೀಮತಿ ಎಲ್‌ವಿ ಪಾಲಿಟೆಕ್ನಿಕ್ ಕಾಲೇಜಿಗೆ ನೇಮಕ ಮಾಡಲಾಯಿತು. ಅವ್ಯವಹಾರ ಬಯಲಿಗೆ ಎಳೆಯಲು ಪ್ರಯತ್ನಿಸಿದ ಕಾರಣಕ್ಕೆ ವರ್ಗಾವಣೆ ಮಾಡಿದ ಕ್ರಮದ ವಿರುದ್ಧವೂ ಹೋರಾಟ ಮುಂದುವರೆಸಿದರು.

ಈ ಸಂಬಂಧ ರಾಜ್ಯಪಾಲರಿಗೆ 13 ಬಾರಿ ಮತ್ತು ರಾಜ್ಯ ಸರ್ಕಾರಕ್ಕೆ 65 ಬಾರಿ ಪತ್ರ ಬರೆದಿರುವುದಾಗಿ ಜಯಂತ್ ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರಕ್ಕೆ ಬಲಿ: ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಸೆ.14 ರಂದು ರಾಜ್ಯಪಾಲರ ಹೆಸರಿಗೆ 1 ಲಕ್ಷ ರೂ.ನ ಚೆಕ್ ಬರೆದು ಕಳುಹಿಸಿದ್ದೇನೆ. ಇದು ನನ್ನ ಸಾಂಕೇತಿಕ ಪ್ರತಿಭಟನೆಯಾಗಿದೆ. ರಾಜ್ಯಪಾಲರ ಆದೇಶವನ್ನೂ ಪಾಲಿಸದ ಹಿನ್ನೆಲೆಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಮನಗಂಡು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗೆ ಈ ಹಣ ವರ್ಗಾಯಿಸಿ ಅನ್ಯಾಯ ಸರಿಪಡಿಸಿಕೊಂಡುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಆದರೆ ಇದಕ್ಕೆ ದೊರೆತಿರುವ ಪ್ರತಿಫಲ ತಮ್ಮನ್ನು ಸೇವೆಯಿಂದ ಅಮಾನತು ಮಾಡಿದ್ದು, ಇದರ ವಿರುದ್ಧ ಹೈಕೋರ್ಟಿನಲ್ಲಿ ಹೋರಾಟ ನಡೆಸಲು ಯೋಜಿಸಿದ್ದೇನೆ. ಇಲಾಖೆಯ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದೇನೆ. ನನಗೆ 7 ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ವರ್ಗಾವಣೆ ಭತ್ಯೆಯೂ ಇಲ್ಲ. ಕಳೆದ ನಾಲ್ಕೂವರೆ ವರ್ಷದಿಂದ ತೀವ್ರ ಕಷ್ಟ ಅನುಭವಿಸಿದ್ದೇನೆ ಎಂದು ಜಯಂತ್ ತಮ್ಮ ದುಃಖ ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+