ರಾಜ್ಯ ಸರಕಾರ ಕಾವೇರಿ ನಿಲ್ಲಿಸುತ್ತಾ, ಇಲ್ವಾ?

ಕರ್ನಾಟಕದ ಸಂಸದರೊಂದಿಗೆ ಮತ್ತು ಕಾನೂನುತಜ್ಞರೊಂದಿಗೆ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ನಂದರ ಜಗದೀಶ್ ಶೆಟ್ಟರ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರು ಪ್ರಾಧಿಕಾರ ನೀಡಿದ್ದ, 9000 ಕ್ಯೂಸೆಕ್ ನೀರು ಬಿಡಬೇಕೆಂಬ ತೀರ್ಪನ್ನು ಮರುಪರಿಶೀಲಿಸಲು ಮತ್ತೆ ಒತ್ತಾಯಿಸುವುದಾಗಿ ಅವರು ಸೋಮವಾರ ಹೇಳಿದರು.
ಸುಪ್ರೀಂ ಕೋರ್ಟಿನಲ್ಲಿ ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದು, ರಾಜ್ಯದಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿ, ಕುಡಿಯಲು ನೀರಿಲ್ಲದ ಸ್ಥಿತಿ ಇರುವುದರಿಂದ ಭೌತಿಕವಾಗಿ ನೀರು ಬಿಡುವುದು ಸಾಧ್ಯವೇ ಇಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಮಾತ್ರ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನೇತೃತ್ವದ ಕಾವೇರಿ ನೀರು ಪ್ರಾಧಿಕಾರವನ್ನೇ ಕೇಳಿ ಸಮಸ್ಯೆಯನ್ನು ಪರಸ್ಪರ ಬಗೆಹರಿಸಿಕೊಳ್ಳಬೇಕೆಂದು ಹೇಳಿದೆ ಎಂದು ಅವರು ಶೆಟ್ಟರ್ ನುಡಿದರು.
ಸೆ.10ರಂದು ಕಾವೇರಿ ನೀರು ಪ್ರಾಧಿಕಾರ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶಿಸಿತ್ತು. ಅದರಂತೆ ಪ್ರತಿದಿನ ಸೆ.12ರಿಂದ ನೀರು ತಮಿಳುನಾಡಿಗೆ ಬಿಡಲಾಗುತ್ತಿದೆ. ಆದರೆ, ಮತ್ತಷ್ಟು ನೀರು ಬಿಡಲು ಕರ್ನಾಟಕದ ಜಲಾಶಯದಲ್ಲಿ ನೀರು ಇಲ್ಲವೇ ಇಲ್ಲ. ನಾಳೆಯೇ, ಅಂದರೆ ಮಂಗಳವಾರ ಬೆಳಿಗ್ಗೆಯೇ ಕಾವೇರಿ ನೀರು ಪ್ರಾಧಿಕಾರವನ್ನು ತನ್ನ ಆದೇಶವನ್ನು ಮರುಪರಿಶೀಲಿಸಲು ಕೋರುವುದಾಗಿ ಅವರು ಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಮತ್ತು ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಅವರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಹೇಳಿದ್ದೇನು? : ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಕಾವೇರಿ ನೀರು ವಿವಾದವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕೆಂದು ಮನವಿ ಮಾಡಲು ಹೋಗಿದ್ದ ರಾಜ್ಯದ ಕಾಂಗ್ರೆಸ್ ನಾಯಕರಿಗೆ, ತಮಿಳುನಾಡು ಮತ್ತು ಕರ್ನಾಟಕದಲ್ಲಿನ ನೀರಿನ ಸ್ಥಿತಿಯನ್ನು ಅಧ್ಯಯನ ಮಾಡಿದ ಕೇಂದ್ರ ತಂಡ ವರದಿ ನೀಡಿದ ಮೇಲೆಯೇ ತಮ್ಮ ತೀರ್ಮಾನ ನೀಡುವುದಾಗಿ ತಿಳಿಸಿದ್ದಾರೆ.
ಚರ್ಚೆಗೆಂದು ಬಂದಿದ್ದ ಕರ್ನಾಟಕದ ಶಾಸಕರು ಹೊರನಡೆಯದಿದ್ದರೆ ಕುಳಿತು ಚರ್ಚಿಸಿ ಎರಡೂ ರಾಜ್ಯಕ್ಕೆ ತೊಂದರೆಯಾಗದಂತೆ ತೀರ್ಮಾನ ನೀಡಬಹುದಿತ್ತು ಎಂದು ಮನಮೋಹನ ಸಿಂಗ್ ಅವರು ರಾಜ್ಯ ಸರಕಾರದ ಮೇಲೆಯೇ ಆರೋಪ ಹೊರಿಸಿದ್ದಾರೆ. ಹಾಗಾಗಿ, ಮಂಗಳವಾರವೇ ರಾಜ್ಯದ ಶಾಸಕರು ಸಿಆರ್‌ಎ ನೀಡಿದ ತೀರ್ಪಿನ ಮರುಪರಿಶೀಲಸಲು ಒತ್ತಾಯ ಮಾಡಿದರೂ, ಪ್ರಧಾನಿಯವರು ಎರಡೂ ರಾಜ್ಯಗಳ ಸಭೆಯನ್ನು ಕರೆಯುವುದು ಕೇಂದ್ರ ಅಧ್ಯಯನ ತಂಡ ವರದಿ ನೀಡಿದ ಮೇಲೆಯೆ.
ಆದರೆ, ಸುಪ್ರೀಂ ಕೋರ್ಟ್ ಮುಂದೆ ನಮ್ಮಿಂದ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುತ್ತಾ? ಅಥವಾ ಕಾವೇರಿ ನೀರು ಪ್ರಾಧಿಕಾರದ ಸಭೆ ಕರೆಯುವವರೆಗೆ ನೀರು ಬಿಡುತ್ತಲೇ ಇರುತ್ತದಾ? ಕಾದು ನೋಡೋಣ. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೂ ಅದನ್ನೇ, ಕಾದು ನೋಡಿ! ಆದರೆ, ನೀರು ಬಿಡ್ತಾರಾ ಇಲ್ಲವಾ ಎಂಬುದನ್ನು ಮಂಡ್ಯದ ರೈತರು ಕಾಯುತ್ತಾ ಕುಳಿತುಕೊಳ್ಳಬೇಕಾದಿದೆ.












Click it and Unblock the Notifications