ಕಬಿನಿ ಜಲಾಶಯಕ್ಕೆ ಧುಮಿಕಿದ ಮಂಡ್ಯ ಕಬ್ಬು ರೈತರು

ಎಲ್ಲೆಲ್ಲಿ ಏನೇನು: ಸದ್ಯಕ್ಕೆ KRS ಮೂರು ದಿನ ಬಂದ್. ಪ್ರವಾಸಿಗರು ಮೈಸೂರು, ಮಂಡ್ಯದತ್ತ ಹೋಗುವಂತಿಲ್ಲ. ಮೈಸೂರಿನಲ್ಲಿ ಪ್ರತಿಭಟನೆಯ ಕಾವು ಜೋರು. ಜಯಲಲಿತಾ ಪ್ರತಿಕೃತಿ ದಹನ. ಕಪ್ಪು ಬಾವುಟ ಪ್ದದರ್ಶನ. ಶಿವಮೊಗ್ಗ- ಮೈಸೂರು ರೈಲು ಸ್ಥಗಿತ- ಶಿವಮೊಗ್ಗಕ್ಕೂ ತಟ್ಟಿದ ಬಿಸಿ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಆರಂಭ
ಸುಪ್ರೀಂಕೋರ್ಟ್ ಆದೇಶದ ಪಾಲಿಸುವ ಸಂಬಂಧ ಮುಖ್ಯಮಂತ್ರಿ ಶೆಟ್ಟರ್ ಅವರು ಕರೆದಿರುವ ಸರ್ವ ಪಕ್ಷಗಳ ಸಭೆ ಕರೆದಿರುವ ಬೆನ್ನಲ್ಲೇ ರೈತರು ಕೋರ್ಟ್ ನಿರ್ದೇಶನಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿ, ರೈತರು ಸಾಮೂಹಿಕವಾಗಿ ನೀರಿಗಿಳಿದು ಜಲಸತ್ಯಾಗ್ರಹದಲ್ಲಿ ತೊಡಗಿದ್ದಾರೆ.
ಸು.ಕೋರ್ಟ್ ಹೇಳಿರುವಂತೆ ಕಾವೇರಿ ನೀರು ಬಿಡುವುದೇ ಆದರೆ ಮೊದಲು ಕಬಿನಿ ಜಲಾಶಯದ ಮೂಲಕವೇ ನೀರನ್ನು ಬಿಡಬೇಕು. ಆದರೆ ಕಬಿನಿಯ ಎಡ ಮತ್ತು ಬಲದಂಡೆಯಲ್ಲಿ ನಮ್ಮ ಕಬ್ಬು ಬೆಳೆದು ನಿಂತಿದೆ. ಇಲ್ಲಿನ ನೀರನ್ನು ಬಿಟ್ಟರೆ ಬೆಳೆ ನಾಶವಾಗುತ್ತದೆ. ಆದ್ದರಿಂದ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡೋಲ್ಲ ಎಂದು ನೀರಿಗಿಳಿದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಒಂದು ವೇಳೆ ಕಬಿನಿಯಿಂದ ಸರಕಾರ ನೀರು ಬಿಟ್ಟರೆ ನೀರಿನ ಜತೆಜತೆಗೆ ತಮಿಳುನಾಡಿನತ್ತ ನಮ್ಮ ದೇಹಗಳೂ ಸಾಗಿಹೋಗಲಿವೆ' ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರಕಾಶ್ ಅವರು ತಿಳಿಸಿದ್ದಾರೆ.
ಹಾಗಾಗಿ, ಮಂಡ್ಯದ ಟಿ ನರಸಾಪುರ ತಾಲೂಕಿನಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಮಂಡ್ಯ ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್ ಬಿಗಿ ಭದ್ರತೆಯೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಮಧ್ಯೆ, ಮಂಡ್ಯ, ಮೈಸೂರು ಜಿಲ್ಲೆಯಾದ್ಯಂತ ನಿನ್ನೆಯಿಂದಲೇ ಬಿಗಿ ಬಂದೂಬಸ್ತ್ ಹಾಕಲಾಗಿದೆ.
ನಿನ್ನೆ ಕರ್ನಾಟಕಕ್ಕೆ ಮಾರಕವಾಗುವ ರೀತಿ ತೀರ್ಪು ನೀಡಿದವರು ನ್ಯಾ. ಡಿ. ಕೆ. ಜೈನ್ ಮತ್ತು ನ್ಯಾ. ಮದನ್ ಬಿ. ಲೋಕುರ್ ಅವರುಗಳು. ಅಂದಹಾಗೆ, ಜಡ್ಜ್ ಮದನ್ ಭೀಮರಾವ್ ಲೋಕೂರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಲೋಕೂರಿನವರು.
ಇನ್ನು, ಇಂತಹ ತೀರ್ಪು ನೀಡುವುದಕ್ಕೆ ಕಾರಣವಾಗುವ ರೀತಿ ಕರ್ನಾಟಕದ ಪರ ಪೇಲವವಾಗಿ ಪ್ರತಿವಾದ ಮಂಡಿಸುತ್ತಿರುವವರು ಪಾಲಿ ಎಸ್ ನಾರಿಮನ್, ಜವಳಿ, ಮೋಹನ್ ಕಾತರಕಿ ಹಾಗೂ ಬ್ರಿಜೇಶ್ ಕಾಳಪ್ಪ.












Click it and Unblock the Notifications