ಬಸ್-ಸ್ಕೂಟರ್ ಡಿಕ್ಕಿ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಮಾಗಡಿ ರಸ್ತೆ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾಜಾಜಿನಗರ ರಾಮಮಂದಿರ ಬಳಿ ವಾಸಿಸುತ್ತಿದ್ದ 20 ವರ್ಷದ ಪ್ರೀತಿ ಕೆಆರ್ ರಸ್ತೆ ಬಳಿಯ ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು.
ಬೆಳಗ್ಗೆ 10 ಗಂಟೆ ಸುಮಾರಿಗೆ ಹೋಂಡಾ ಆಕ್ಟಿವಾ ಹತ್ತಿ ಕಾಲೇಜಿಗೆ ತೆರಳಿದ್ದಳು. ವಾಟಾಳ್ ನಾಗರಾಜ್ ರಸ್ತೆ ಮೂಲಕ ಮೈಸೂರು ರಸ್ತೆ ಡೀವಿಯೇಷನ್ ನಲ್ಲಿ ಹೋಗುವಾಗ ಮಲ್ಲಿಕಾರ್ಜುನ ಖಾಸಗಿ ಬಸ್ ಹಿಂದಿನಿಂದ ಜೋರಾಗಿ ಬಡಿದಿದೆ. ಕೆಬಿ ಜಂಕ್ಷನ್ ಮೂಲಕ ಕೆಆರ್ ಮಾರುಕಟ್ಟೆಗೆ ಕಡೆಗೆ ಖಾಸಗಿ ಬಸ್ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆದಲ್ಲೇ ಕೊನೆಯುಸಿರೆಳೆದಿದ್ದಾಳೆ. ತಂದೆ ತಾಯಿಗೆ ಒಬ್ಬಳೆ ಮಗಳಾಗಿದ್ದ ಪ್ರೀತಿ ಸಾವಿನಿಂದ ಅವರ ಕುಟುಂಬ ವರ್ಗ ತತ್ತರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಖಾಸಗಿ ಬಸ್ ಚಾಲಕನನ್ನು ಸ್ಥಳೀಯರು ಬಂಧಿಸಿ ಮಾಗಡಿ ರಸ್ತೆ ಸಂಚಾರ ಠಾಣೆಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಸತ್ಯವತಿ ಹೇಳಿದ್ದಾರೆ.
ಪಾದಚಾರಿ ಸಾವು: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾನೋಜಿ ಪಾಳ್ಯದ ನಿವಾಸಿ 30 ವರ್ಷದ ರಾಜ್ಯ ಎಂಬುವರು ಮೃತಪಟ್ಟ ದುರ್ದೈವಿ. ಮನೆಬೆಂಗಳೂರು ಹಾಗೂ ತುಮಕೂರು ರಸ್ತೆ ಕಡೆಯಿಂದ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಆಗ ಲಾರಿ ಹೊಡೆದು ಮೃತಪಟ್ಟಿದ್ದಾರೆ.
ಘಟನೆ ನಂತರ ಆರೋಪಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ನೆಲಮಂಗಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚೇತನ್ ಕುಮಾರ್ ಹೇಳಿದ್ದಾರೆ.












Click it and Unblock the Notifications