ಎಲ್ ಪಿಜಿ ಸಿಲಿಂಡರ್ ವಿತರಕರ ಮುಷ್ಕರಕ್ಕೆ ಸಿದ್ಧರಾಗಿ

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಎಲ್ ಪಿಜಿ ನೀತಿ ವಿರೋಧಿಸಿ ಅಡುಗೆ ಅನಿಲ ವಿತರಕರು ಅಕ್ಟೋಬರ್ 1 ರಂದು ಮುಷ್ಕರ ಹೂಡುವ ಬೆದರಿಕೆ ಒಡ್ಡಿದ್ದಾರೆ.
ಸಬ್ಸಿಡಿ ಪಡೆದ ಸಿಲಿಂಡರ್ ಗಳ ಮಿತಿ ನೀತಿಯ ವಿರುದ್ಧ ಸಿಟ್ಟಿಗೆದ್ದಿರುವ ಎಲ್ ಪಿಜಿ ವಿತರಕರು ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ಸುಮಾರು 1,200 ಡೀಲರ್ ಗಳು ಹಾಗೂ ವಿವಿಧ ಗ್ಯಾಸ್ ಏಜೆನ್ಸಿ ಸದಸ್ಯರು ರಾಷ್ಟ್ರಮಟ್ಟದಲ್ಲಿ ಮಂಗಳವಾರ(ಸೆ.25) ಸಭೆ ಸೇರಲಿದ್ದಾರೆ.
ಈ ಸಭೆಯ ನಂತರ ಗ್ಯಾಸ್ ಏಜೆನ್ಸಿ ಬೇಡಿಕೆ ಹಾಗೂ ಮುಷ್ಕರದ ರೂಪುರೇಷೆಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಅಡುಗೆ ಅನಿಲ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ಪವನ್ ಸೋನಿ ಮಾತನಾಡಿ, ಕೇಂದ್ರ ಸರ್ಕಾರದ ಎಲ್ ಪಿಜಿ ನೀತಿಯಿಂದ ಗ್ರಾಹಕರಷ್ಟೇ ಅಲ್ಲ ಏಜೆನ್ಸಿಗಳಿಗೂ ಕೂಡಾ ತೊಂದರೆಯಾಗುತ್ತಿದೆ.
ಸರ್ಕಾರದ ಈ ನೀತಿಯಿಂದ ಕಾಳಸಂತೆಯಲ್ಲಿ ಸಿಲಿಂಡೆರ್ ಮಾರಾಟ ಹೆಚ್ಚಾಗುತ್ತದೆ. ಗ್ರಾಹಕರು ಇನ್ನಷ್ಟು ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಗ್ಯಾಸ್ ಏಜೆನ್ಸಿಗಳು ಸಿಬ್ಬಂದಿ ಸಮಸ್ಯೆ, ಮೂಲ ಸೌಕರ್ಯ ಕೊರತೆ ಅನುಭವಿಸುತ್ತಿದೆ ಈ ಬಗ್ಗೆ ಸರ್ಕಾರ ಎಂದಾದರೂ ಗಮನ ಹರಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇಂಧನ ಸಂಸ್ಥೆಗಳಿಂದ ಎಲ್ ಪಿಜಿ ವಿತರಕರಿಗೆ ಪ್ರತಿ ಸಿಲಿಂಡರ್ ಗೆ ರು 25.83 ಕಮಿಷನ್ ದರ ಸಿಗುತ್ತಿದ್ದು ಇದು 2010 ರಿಂದ ಪರಿಷ್ಕರಣೆಗೊಂಡಿಲ್ಲ. ದೇಶದಾದ್ಯಂತ 200,000 ಸಿಲಿಂಡರ್ ವಿತರಣೆ ಹುಡುಗರನ್ನು ಹೊಂದಿದ್ದೇವೆ ಅವರಿಗೆ ಪ್ರತಿ ಸಿಲಿಂಡರ್ ಗೆ 8 ರು.ನಂತೆ ಮಾತ್ರ ಸಿಗುತ್ತಿದೆ ಇದು ಬದಲಾಗಬೇಕಿದೆ ಎಂದು ಸೋನಿ ಹೇಳಿದ್ದಾರೆ.
ಸಬ್ಸಿಡಿ ಎಲ್‌ಪಿಜಿ ಸಿಲಿಂಡರನ್ನು ವರ್ಷಕ್ಕೆ 6 ಮಾತ್ರ ಎಂದು ನಿಗದಿಪಡಿಸಿ ಕೇಂದ್ರ ಸರಕಾರ ಸೆಪ್ಟೆಂಬರ್ 13ರಂದು ಆದೇಶ ಹೊರಡಿಸಿತ್ತು. ಏಳನೇ ಅಡುಗೆ ಅನಿಲ ಬೇಕಿದ್ದರೆ, ಈಗಿನ 415 ರು.ಗೆ ಬದಲಾಗಿ 720 ರು.ಗೂ ಹೆಚ್ಚು ಬೆಲೆ ತೆತ್ತು ಖರೀದಿ ಮಾಡಬೇಕಿದೆ.
ಅದೇ ದಿನ ಡೀಸೆಲ್ ದರವನ್ನು ಲೀಟರಿಗೆ 5 ರು.ನಷ್ಟು ಏರಿಸಲಾಯಿತು. ರಿಯಾಯಿತಿ ಎಲ್‌ಪಿಜಿ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6 ರಿಂದ 10ಕ್ಕೆ ಏರಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದರೂ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಜಾರಿಗೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.












Click it and Unblock the Notifications