ಅಕ್ಟೋಬರ್ 6ರಂದು ಕರ್ನಾಟಕ ಬಂದ್ ಗೆ ಕರೆ

ಸಾರಿಗೆ ಸಂಸ್ಥೆ ನೌಕರರ ಮುಷ್ಕರ, ಭಾರತ ಬಂದ್ ನಂತರ ಇನ್ನೊಂದು ಬಂದ್ ಗೆ ರಾಜ್ಯ ಸಿದ್ದವಾಗಬೇಕಿದೆ.
ಸೋಮವಾರ (ಸೆ 24) ದಿಂದ ರಾಜ್ಯದ ಕೇಂದ್ರ ಸರಕಾರೀ ಕಚೇರಿಗೆ ಬೀಗ ಮತ್ತು ಪ್ರತಿಭಟನೆ ನಡೆಸುವುದು ಅಲ್ಲದೆ ರಾಜಭವನ ಮುತ್ತಿಗೆ ಹಾಕಲು ಕರವೇ (ನಾರಾಯಣ ಗೌಡ) ಬಣ ನಿರ್ಧರಿಸಿದೆ.
ದೆಹಲಿಗೆ ತೆರಳಿ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು, ಕೇಂದ್ರ ಸರಕಾರದಲ್ಲಿರುವ ನಮ್ಮ ನಾಲ್ಕು ಸಚಿವರುಗಳು ರಾಜೀನಾಮೆ ನೀಡಬೇಕೆಂದು ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
ಶುಕ್ರವಾರ (ಸೆ 21) ನಡೆದ ಖಂಡನಾ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.
ಕಾವೇರಿ ನೀರು ಬಿಡದಂತೆ ಅಕ್ಟೋಬರ್ 1ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕಿನಿಂದ ರಾಜಭವನದ ವರೆಗೆ ಬೃಹತ್ ರಾಜಭವನ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಸೆಪ್ಟಂಬರ್ 26ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕನ್ನಡಪರ ಕಾರ್ಯಕರ್ತರ ಬೃಹತ್ ಸಮಾವೇಶ ಕರವೇ ಹಮ್ಮಿಕೊಂಡಿದೆ.
ಈ ಹೋರಾಟ ತಮಿಳರ ವಿರುದ್ದ ಅಲ್ಲ, ರಾಜ್ಯಕ್ಕೆ ಕೇಂದ್ರದಿಂದ ಆದ ಅನ್ಯಾಯದ ವಿರುದ್ದ ಎಂದು ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿಯಿಂದ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ದೆಹಲಿಯಲ್ಲಿ ಘೋಷಿಸಿದ್ದಾರೆ.
ಕಾವೇರಿ ನದಿ ನೀರು ಪ್ರಾಧಿಕಾರದ ನಿರ್ಧಾರ ರಾಜ್ಯಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಪ್ರಧಾನಿಯವರಿಗೆ ಮನದಟ್ಟು ಮಾಡಲು ಪ್ರಧಾನಿಯವರನ್ನು ಭೇಟಿ ಮಾಡಲು ಕೃಷ್ಣ ಅವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಅನಿವಾಸ ಭಾರತೀಯರು ಕೈಜೋಡಿಸಿದ್ದಾರೆ.











Click it and Unblock the Notifications