ಕಾವೇರಿ ಹೋರಾಟ: ಕರ್ನಾಟಕದ ನಿಲುವು ಪ್ರಕಟ
ಬೆಂಗಳೂರು, ಸೆ.21: ತಮಿಳುನಾಡಿಗೆ ದಿನಾ ಕಾವೇರಿ ನೀರು ಬಿಡಬೇಕು ಎಂಬ ಪ್ರಧಾನಿ ಸಿಂಗ್ ಅವರ ನಿರ್ದೇಶನವನ್ನು ಸುತರಾಂ ಒಪ್ಪದಿರಲು ಕರ್ನಾಟಕದ ಸರ್ವಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ.

'ಅ. 15ರವರೆಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಬೇಕು ಎಂಬ ಪ್ರಧಾನಿಯ ನಿರ್ಧಾರ ಏಕಪಕ್ಷೀಯವಾಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾವಾಗುತ್ತಿದೆ. ಆದ್ದರಿಂದ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ' ಎಂದು ನಿಯೋಗದ ಸಭೆಯ ಬಳಿಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಈ ಸಂಬಂಧ ಇಂದು ಮಧ್ಯಾಹ್ನ (ಶುಕ್ರವಾರ) ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಹಿತದೃಷ್ಟಿಯಿಂದ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಸಫಲವಾಗಿವೆ.
stop-gap: ಕಾವೇರಿ ಹಂಚಿಕೆ ಸಮಸ್ಯೆಯನ್ನು ಸಭೆಯಲ್ಲಿ ಹನಿ ಹನಿಯಾಗಿ ಚರ್ಚಿಸಲಾಗಿ, ಮೊನ್ನೆ ಬುಧವಾರ (ಸೆ 19) ಕಾವೇರಿ ನದಿ ಪ್ರಾಧಿಕಾರ ಹೊರಡಿಸಿರುವ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ಪ್ರಧಾನಿಯ ನಿರ್ಧಾರ ತಪ್ಪು ನಿರ್ಧಾರವಾಗಿದೆ.
ಆದ್ದರಿಂದ ಪ್ರಾಧಿಕಾರದ ಆದೇಶಕ್ಕೆ ತಕ್ಷಣ ತಡೆ ನೀಡಬೇಕು ಎಂದು ಪ್ರಧಾನ ಮಂತ್ರಿಯನ್ನು ತಕ್ಷಣ ಕೇಳುವುದು. ಮತ್ತು ಅದಾಗುತ್ತಿದ್ದಂತೆ ಕಾನೂನು ಹೋರಾಟದ ಭಾಗವಾಗಿ ರಿಟ್ ಅರ್ಜಿ ಸಲ್ಲಿಸುವುದು ಸಭೆಯ ಪ್ರಧಾನ ನಿರ್ಣಯವಾಗಿದೆ ಎಂದು ಸಿಎಂ ಶೆಟ್ಟರ್ ಸಭೆಯ ಬಳಿಕ ಹೇಳಿದ್ದಾರೆ.
ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರ್ ಅಶೋಕ್ ಮುಂತಾದ ನಾಯಕರು ಭಾಗವಹಿಸಿದ್ದರು.












Click it and Unblock the Notifications