ಪಾಕ್ ಹಿಂದೂ ದೇಗುಲ ಧ್ವಂಸಕ್ಕೆ ಕೋರ್ಟ್ ತಡೆ

ದೇವಾಲಯದ ವಾಸ್ತವಸ್ಥಿತಿ, ಅದರ ಸುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ಚಿತ್ರಣವನ್ನು ಪರಿಶೀಲಿಸಿ ಏಳು ದಿನಗಳೊಳಗೆ ವಿಸ್ತೃತ ವರದಿಯನ್ನು ನೀಡುವಂತೆ ವಿಶೇಷ ವೀಕ್ಷಕನನ್ನು ನೇಮಿಸಿ ನಿರ್ದೇಶನ ನೀಡಿದೆ.10 ದಿನಗಳ ಮಟ್ಟಿಗೆ ವಿಚಾರಣೆಯನ್ನು ಮುಂದೂಡಲಾಗಿದೆ.
ನಗರದ ನೆಟ್ಟಿವ್ ಜೆಟ್ಟಿ ಎಂಬ ಸೇತುವೆ ಬಳಿಯಿರುವ ಶ್ರೀಲಕ್ಷ್ಮಿ ನಾರಾಯಣ ಮಂದಿರವನ್ನು ಕೆಡವದಂತೆ ಕೈಲಾಸ್ ವಿಶ್ರಮ್ ಎಂಬ ಸ್ಥಳೀಯ ನಿವಾಸಿ ಸಿಂಧ್ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು. ದೂರನ್ನು ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿ ಮುಷಿರ್ ಆಲಂ ಅವರ ಅಧ್ಯಕ್ಷತೆಯ ವಿಭಾಗೀಯ ಪೀಠ, ದೇವಾಲಯ ನಿರ್ನಾಮ ಕಾರ್ಯಕ್ಕೆ ತಡೆಯೊಡ್ಡಿ ಆದೇಶ ಹೊರಡಿಸಿದರು..
ಇತಿಹಾಸ ಪ್ರಸಿದ್ಧ ನೆಟ್ಟಿವ್ ಜೆಟ್ಟಿ ಸೇತುವೆ ಅಡಿಯಲ್ಲಿ ನಿರ್ಮಿಸಲಾಗಿರುವ ಪ್ರಖ್ಯಾತ ಆಹಾರ ಸಾಮಗ್ರಿ ದೊರೆಯುವ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಲಕ್ಷ್ಮಿನಾರಾಯಣ ದೇವಾಲಯವನ್ನು ಧ್ವಂಸ ಮಾಡಬೇಕೆಂದು ಕರಾಚಿ ಪೋರ್ಟ್ ಟ್ರಸ್ಟ್(KPT) ಮತ್ತು ಇತರೆ ಸ್ಥಳೀಯರು ತೀರ್ಮಾನ ಕೈಗೊಂಡಿದ್ದರು.
ಉಪಖಂಡದ ವಿಭಜನಗೆ ಮುನ್ನವೇ ಲಕ್ಷ್ಮಿ ನಾರಾಯಣ ದೇವಾಲಯವನ್ನು ನಿರ್ಮಿಸಲಾಗಿದೆ. ಪೂಜಾ ವಿಧಿ ವಿಧಾನಗಳಿಗೆ ಅಗತ್ಯವಾಗಿರುವ ಸಮುದ್ರ ನೀರು ಸಹ ಸನಿಹದಲ್ಲೇ ಇರುವುದರಿಂದಾಗಿ ಹಿಂದೂಗಳು ತಲತಲಾಂತರದಿಂದಲೂ ಇಲ್ಲಿ ತಮ್ಮ ಪೂಜಾ ಕೈಂಕರ್ಯಗಳನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ವಿಶ್ರಮ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದಕ್ಕೆ ಇಂಬು ನೀಡುವಂತೆ ಈ ದೇವಾಲಯವನ್ನು 200 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ ಎಂದು ಪಾಕಿಸ್ತಾನ ಹಿಂದೂ ಕೌನ್ಸಿಲ್ ವರದದಿ ನೀಡಿತ್ತು. ಅಲ್ಲದೆ, ರಕ್ಷಾ ಬಂಧನ (ನಾರಿಯಲ್ ಪೂಜಾ), ಗಣೇಶ ಚತುರ್ಥಿ ಮತ್ತು ಚಂದ್ರನ ಹೊಸ ರಾತ್ರಿಯನ್ನು ಹಿಂದೂಗಳು ಇಲ್ಲಿ ಆಚರಿಸುತ್ತಾ ಬಂದಿದ್ದಾರೆ ಎಂದು ಕೌನ್ಸಿಲ್ ತನ್ನ ವರದಿಯಲ್ಲಿ ವಿವರಿಸಿತ್ತು.
ಅಂತ್ಯಕ್ರಿಯೆ, ಸಾವಿನ ನಂತರದ ಕ್ರಿಯಾವಿಧಿಗಳು ಮತ್ತು ಇತರೆ ಧಾರ್ಮಿಕ ಕಾರ್ಯಗಳನ್ನು ನಡೆಸಲು ಇದೊಂದು ಪವಿತ್ರ ಸ್ಥಳವಾಗಿದೆ. ಪೋರ್ಟ್ ಗ್ರ್ಯಾಂಡ್ ಎಂಬ ಹೆಸರಿನಲ್ಲಿ ಆಹಾರ ಸಾಮಗ್ರಿಗಳ ಮಾರುಕಟ್ಟೆ ತೆರೆದಿರುವ ಖಾಸಗಿ ಕಂಪನಿ, ಕೆಪಿಟಿ ಎಂಬ ಮತ್ತೊಂದು ಕಂಪನಿ ಜತೆ ಕೈ ಜೋಡಿಸಿದ್ದು ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಮೂಲಕ, ದೇವಾಲಯಕ್ಕೆ ದೊರೆಯುತ್ತಿದ್ದ ಸಮುದ್ರ ನೀರಿನ ಮಾರ್ಗವನ್ನೇ ಸ್ಥಗಿತಗೊಳಿಸಿದೆ.
ಕೆಪಿಟಿ ಉಗ್ರಾಣ ನಿರ್ಮಾಣ ಕಾರ್ಯದಿಂದ ಧಾರ್ಮಿಕ ಸ್ಥಳಕ್ಕೆ ಅವಸಾನ ಭೀತಿ ಮತ್ತು ಅಲ್ಪಸಂಖ್ಯಾತ ವರ್ಗದ ಹಕ್ಕಿಗೂ ಚ್ಯುತಿ ಬಂದಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು. ಅಸಂಖ್ಯಾತ ಹಿಂದೂ ಧಾರ್ಮಿಕ ಸ್ಥಳಗಳಿಗೆ ಸಂಚಕಾರದ ಜೊತೆಗೆ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸಲು ಭೀತಿ ಪಡುವ ಕಾಲ ಬಂದಿದೆ.












Click it and Unblock the Notifications