ಮಾತುಕತೆ ವೈಫಲ್ಯ, ಸಾರಿಗೆ ಮುಷ್ಕರ ನಿರಂತರ
ಬೆಂಗಳೂರು, ಸೆ.13: ಬಹುಶಃ ವಾರಾಂತ್ಯದವರೆಗೂ ಪ್ರಯಾಣಿಕರ ಬವಣೆ ಮುಂದುವರೆಯಲಿದೆ. ಎಸ್ಮಾ ಜಾರಿಮಾಡುತ್ತೇವೆ. ಮುಷ್ಕರದಿಂದ ತೊಂದರೆಯಾಗೇ ಇಲ್ಲ ಎಂದು ಸರ್ಕಾರ ಸಚಿವ ಅಶೋಕ್ ಹೇಳುತ್ತಿದ್ದರೆ, ನಮ್ಮ ಪಟ್ಟು ಬಿಡುವುದಿಲ್ಲ ಎಂದು ನೌಕರರ ಸಂಘ ಹೇಳುತ್ತಿದೆ ಇಬ್ಬರ ಮಧ್ಯೆ ಸಿಲುಕಿದ ಪ್ರಯಾಣಿಕರು ನಜ್ಜುಗುಜ್ಜಾಗಿದ್ದಾರೆ.
ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ(ಸೆ.14) ನಗರದ ಕೆಲ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಅಶೋಕ್ ಮಲತಾಯಿ ಧೋರಣೆ: ಐಟಿ ಕಂಪೆನಿಗಳಿಗೆ ಹೆಚ್ಚಿನ ಬಿಸಿ ತಟ್ಟದಿದ್ದರೂ ಶುಕ್ರವಾರ ಪರಿಸ್ಥಿತಿ ಹೀಗೆ ಇದ್ದರೆ ಬಹುತೇಕ ಉದ್ಯೋಗಿಗಳು ರಜೆ ಅಥವಾ ವರ್ಕ್ ಫ್ರಂ ಹೋಂ ಸೌಲಭ್ಯಕ್ಕೆ ಮೊರೆ ಹೋಗಲಿದ್ದಾರೆ. ರಜೆ ಪಡೆದವರು ವಾರಾಂತ್ಯದಲ್ಲಿ ಹೆಚ್ಚುವರಿ ಕೆಲಸ ನಿರ್ವಹಿಸಬೇಕಾದ ಬಿಸಿ ಕೂಡಾ ಇರುತ್ತದೆ. ನಗರ ಹೊರ ವಲಯದಲ್ಲಿರುವ ಖಾಸಗಿ ಸಂಸ್ಥೆಗಳು ಗಾರ್ಮೆಂಟ್ಸ್ ಗಳು ಸಿಬ್ಬಂದಿ ಕೊರತೆ ಅನುಭವಿಸಿ ತತ್ತರಿಸಿದೆ.
ಈಶಾನ್ಯ ಭಾರತೀಯರ ಗುಳೆಯನ್ನು ತಡೆಗಟ್ಟಲು ಹಗಲು ರಾತ್ರಿ ಶ್ರಮಿಸಿದ ಮಾನ್ಯ ಸಚಿವರು, ವಲಸಿಗರ ಮೇಲೆ ತೋರಿಸುವ ಪ್ರೀತಿಯನ್ನು ಸ್ವಲ್ಪಮಟ್ಟಿಗಾದರೂ ತಮ್ಮ ಇಲಾಖೆಯ ನೌಕರರ ಜೊತೆ ತೋರಿಸಬೇಕಿದೆ. ಇದು ದಿಢೀರ್ ಮುಷ್ಕರವಲ್ಲ. ಆ.9 ರಂದು ಮುಷ್ಕರದ ಬಗ್ಗೆ ಸಭೆಯಲ್ಲಿ ಹೇಳಿದರೆ, ನಿರ್ಲಕ್ಷಿಸಿದ್ದಾರೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಿಎಂಟಿಸಿಗೆ 4 ಕೋಟಿ, ಕೆಎಸ್ಸಾರ್ಟಿಸಿಗೆ 16 ಕೋಟಿ ರು ನಷ್ಟ ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದು, ಮುಷ್ಕರ ಹೂಡಿದ ನೌಕರರನ್ನು ಗುರುತಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಆದರೆ, ಸಾರಿಗೆ ಸಚಿವರಾಗಲಿ, ಹಿರಿಯ ಅಧಿಕಾರಿಗಳಾಗಲಿ ನಮ್ಮ(ಮುಷ್ಕರಕ್ಕೆ ಕರೆ ನೀಡಿದ 5 ನೌಕರರ ಸಂಘಟನೆಗಳು) ಜೊತೆ ಯಾವುದೇ ಸಂಧಾನ ಮಾತುಕತೆ ನಡೆಸಿಲ್ಲ. ನಮ್ಮ 42 ಬೇಡಿಕೆ ಈಡೇರಿಸಬೇಕು. ಎಲ್ಲಕ್ಕೂ ಲಿಖಿತ ರೂಪದ ಒಪ್ಪಿಗೆ ಸಿಗಬೇಕು. ಇಲ್ಲದಿದ್ದರೆ ಮುಷ್ಕರ ಮುಂದುವರೆಯಲಿದೆ ಎಂದು ಸಾರಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ಹೇಳಿದ್ದಾರೆ.[ಗುರುವಾರ ಪರದಾಟದ ವರದಿ]
ಸದ್ಯಕ್ಕೆ ಈಡೇರಿಸಬೇಕಾಗಿರುವ ಬೇಡಿಕೆಗಳು :
* ಮುಷ್ಕರದ ನೆಪದಲ್ಲಿ ಉದ್ದೇಶಪೂರ್ವಕವಾಗಿ ಬಂಧಿಸಿರುವ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬೇಕು
* ಏಕಪಕ್ಷೀಯ ನಿರ್ಣಯ ಕೈಗೊಳ್ಳುವುದನ್ನು ಬಿಡಬೇಕು. ಜಂಟಿ ಸಮಿತಿ ಮುಂದೆ ಎಲ್ಲವೂ ನಿರ್ಧಾರಗೊಳ್ಳಬೇಕು
* ರಾಜ್ಯ ಸರ್ಕಾರಿ ನೌಕರರ ವೇತನದ ಸಮವಾಗಿ ಸಂಬಳ, ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ನೀಡಬೇಕು.
* 36 ಗಂಟೆ ನಿರಂತರ ಕೆಲಸ ಅವಧಿಗೆ ಕತ್ತರಿ ಹಾಕಿ 8 ಗಂಟೆ ಅವಧಿಯನ್ನು ನಿಗದಿಪಡಿಸಬೇಕು
* ಟ್ರೈನಿಗಳಿಗೆ ಸಿಬ್ಬಂದಿ ವೇತನ ಹಾಗೂ ಕುಟುಂಬ, ಆರೋಗ್ಯ ವಿಮೆ ನೀಡಬೇಕು.
* ಶೇ 10 ರಿಂದ ಶೇ 35 ರಷ್ಟು ವೇತನ ಏರಿಕೆ ಜಾರಿಯಾಗಬೇಕು.
* ಭ್ರಷ್ಟಾಚಾರ, ದಬ್ಬಾಳಿಕೆ ಗುಲಾಮಗಿರಿ ನಿಲ್ಲಬೇಕು. ಲೋಕಾಯುಕ್ತ ತನಿಖೆಗೆ ಆಗ್ರಹ
* ಟ್ರೈನಿಗೆ 4 ಸಾವಿರ ಮಾಸಿಕ ಸಂಬಳ ಸಾಲುತ್ತದೆಯೇ? ನಿವೃತ್ತಿಯಾದವರಿಗೆ ಪಾಸ್ ಕೊಡಲು ಏಕೆ ಹಿಂದು ಮುಂದು ನೋಡುತ್ತೀರಿ?
ಅಶೋಕ್ ದಕ್ಷ ಸಚಿವರಾಗಿದ್ದರೆ ಮುಷ್ಕರಕ್ಕೆ ಕಾರಣರಾದ ವಿಜಯ್ ಕುಮಾರ್ ರೈ, ಪದ್ಮನಾಭನ್, ಎಂಡಿ ಮಂಜುನಾಥ್ ಪ್ರಸಾದ್ ಅವರ ಮೇಲೆ ಕ್ರಮ ಜರುಗಿಸಬೇಕು.
ಗುರುವಾರದ ಬಂದ್ ಶೇ 85 ರಷ್ಟು ಬಸ್ ಗಳು ರಸ್ತೆಗಿಳಿದಿಲ್ಲ. ಸರ್ಕಾರ ತನ್ನ ಹಠವನ್ನು ಮುಂದುವರೆಸಿದರೆ ನಾಳೆ ಕೂಡಾ ಬಂದ್ ಮುಂದುವರೆಸಲಾಗುತ್ತದೆ ಎಂದು ಎಸ್ಸಾರ್ಟಿಸಿ, ಬಿಎಂಟಿಸಿ ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಉಪೇಂದ್ರಾಚಾರ್ ಹೇಳಿದ್ದಾರೆ.












Click it and Unblock the Notifications