ಕರ್ನಾಟಕದಲ್ಲಿ ಗಣಿಗಾರಿಕೆಗೆ ಸುಪ್ರೀಂ ಅಸ್ತು

ಈ ಮೂಲಕ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಗಣಿಗಾರಿಕೆ ನಿಷೇಧ ಆದೇಶವನ್ನು ಹಿಂಪಡೆಯಲಾಗಿದೆ. ನ್ಯಾ. ಅಫ್ತಾಬ್ ಆಲಂ ಅವರಿದ್ದ ಮೂವರು ನ್ಯಾಯಾಧೀಶರ ಅರಣ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಸಿಇಸಿ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯದಲ್ಲಿ ಗಣಿ ಸಮೀಕ್ಷೆ ನಡೆಸಿ ನೀಡಿರುವ ವರದಿಯನ್ನು ಅರಣ್ಯ ಪೀಠ ಪುರಸ್ಕರಿಸಿದೆ.
ಆದೇಶದ ಪ್ರಕಾರ ಎ ಕೆಟಗರಿಯಲ್ಲಿದ್ದ 18 ಗಣಿ ಕಂಪನಿಗಳಿಗೆ ಮಾತ್ರ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಎ ಕೆಟಗೆರಿಯಲ್ಲಿ ಒಟ್ಟು 24 ಕಂಪನಿಗಳಿದ್ದು, ಸದ್ಯಕ್ಕೆ 6 ಕಂಪನಿಗಳಿಗೆ ಅನುಮತಿ ನೀಡಿಲ್ಲ. ಸಿಇಸಿ ತಂಡ ಆ.29 ರಂದು ಸಲ್ಲಿಸಿದ್ದ ವರದಿ ಕುರಿತಂತೆ ವಿಚಾರಣೆ ನಡೆಸಿದ ಅರಣ್ಯ ಪೀಠ ತನ್ನ ಆದೇಶವನ್ನು ಸೋಮವಾರಕ್ಕೆ (ಸೆ.3) ಕಾಯ್ದಿರಿಸಿತ್ತು.
ಗಣಿಗಾರಿಕೆ ಪ್ರದೇಶವನ್ನು ಎ,ಬಿ ಹಾಗೂ ಸಿ ಎಂದು ವಿಂಗಡಿಸಲಾಗಿದೆ. ಅಕ್ರಮಗಳ ಆಧಾರದ ಮೇಲೆ ಎ,ಬಿ ಹಾಗೂ ಸಿ ಎಂದು ಗುರುತಿಸಲಾಗುತ್ತದೆ. ಸಿ ಕೆಟಗೆರಿ ಹೆಚ್ಚಿನ ಅಕ್ರಮ ಎಸೆಗಿರುವ ಕಂಪನಿಗಳು ಕಂಡು ಬರುತ್ತದೆ.
ಎ ಕೆಟಗೆರಿ ಕಂಪನಿಗಳಿಗೆ ಅನುಮತಿ ನೀಡುವುದರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣಾ ಅರ್ಜಿಯನ್ನು ಸ್ವೀಕರಿಸಿದ ಅರಣ್ಯಪೀಠ, ಈ ಬಗ್ಗೆ ಪರಿಶೀಲಿಸಿ ಪ್ರತ್ಯೇಕ ವರದಿ ಸಲ್ಲಿಸುವಂತೆ ಸಿಇಸಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲೆಯ 99 ಗಣಿಗಳು ಸೇರಿದಂತೆ ರಾಜ್ಯದ ಗಣಿಗಾರಿಕೆ ಬಗ್ಗೆ ಸಿಇಸಿ ತನ್ನ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ. ಕರ್ನಾಟಕದಲ್ಲಿ 49 ಗಣಿ ಸಂಸ್ಥೆಗಳ ಲೈಸನ್ ರದ್ದು ಮಾಡುವಂತೆ ವರದಿಯಲ್ಲಿ ಸೂಚಿಸಿತ್ತು.
* ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆಗೆ ಮಾತ್ರ ಅನುಮತಿ.
* ಅತಿಯಾದ ಗಣಿಗಾರಿಕೆಯಲ್ಲಿ ತೊಡಗಿದ್ದ 49 ಕಂಪನಿ ಲೈಸನ್ಸ್ ರದ್ದಿಗೆ ಶಿಫಾರಸು
* ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ನಿರ್ಬಂಧಿತ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಬಹುದು.
* ಬಳ್ಳಾರಿಯಲ್ಲಿ 25 ಮಿಲಿಯನ್ ಮೆಟ್ರಿಕ್ ಟನ್, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್ ಗೆ ಅನುಮತಿ
*72 ಕಂಪನಿಗಳಿಗೆ ದಂಡ, 21 ಕಂಪನಿಗಳಿಗೆ ಪರಿಸರ ರಕ್ಷಣೆ ಯೋಜನೆ ಅನುಗುಣವಾಗಿ ಮಾರ್ಪಾಟು ಮಾಡಲು ಸೂಚನೆ
* ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಹೊಸದಾಗಿ ಗಡಿ ರೇಖೆ ಗುರುತಿಸುವವರೆಗೂ 7 ಕಂಪನಿಗಳು ಗಣಿಗಾರಿಕೆ ನಡೆಸುವಂತಿಲ್ಲ.
* ನಿಗದಿತ ಗಣಿ ಪ್ರದೇಶ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದರೆ 5 ಕೋಟಿ ದಂಡ.
* ಗಣಿಗಾರಿಕೆಯಿಂದ ರಸ್ತೆ ಹಾಳುಗೆಡವಿದರೆ 1 ಕೋಟಿ ರು ದಂಡ.
ಮುಂತಾದ ಅಂಶಗಳು ಸಿಇಸಿ ವರದಿಯಲ್ಲಿ ಕಂಡು ಬಂದಿದೆ.











Click it and Unblock the Notifications