ಗಣೇಶನ ಹಬ್ಬಕ್ಕೆ ಕೃಷ್ಣಗೆ ಮತ್ತೆ ರಾಜ್ಯ ಕಾಂಗ್ರೆಸ್ ಸಾರಥ್ಯ?

ಮುಖ್ಯವಾಗಿ, ಹಾಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಾ. ಪರಮೇಶ್ವರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಬ್ಬರೂ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಪರಸ್ಪರ ಬಣಗಳಿಗೆ ನೀರೆರೆಯುತ್ತಿರುವುದು ಹೈಕಮಾಂಡಿಗೆ ತಲೆ ನೋವಾಗಿದೆ.
ಫಿಫ್ಟಿ-ಫಿಫ್ಟಿ ಫಾರ್ಮುಲಾ: ಒಂದು ಹಂತದಲ್ಲಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಆದರೆ ಮೊದಲು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಆನಂತರ ಉಳಿದ ಅವಧಿಗೆ ಪರಮೇಶ್ವರ್ ಅವರನ್ನು ನೇಮಕ ಮಾಡುವ ಫಿಫ್ಟಿ-ಫಿಫ್ಟಿ ಮಂತ್ರಾಲೋಚನೆಯೂ ಹೈಕಮಾಂಡ್ ತಲೆಯಲ್ಲಿ ಸುಳಿದಿತ್ತು.
ಆದರೆ ಕೊನೆಯ ಘಳಿಗೆಯಲ್ಲಿ ಫಾರ್ಮುಲಾ ಬದಲಿಸಿ, ಮತ್ತೆ ಎಸ್‌ಎಂ ಕೃಷ್ಣ ಅವರಿಗೇ ಚುನಾವಣಾ ಪ್ರಚಾರದ ಸಾರಥ್ಯ ವಹಿಸುವ ನಿರ್ಧಾರಕ್ಕೆ ಬಂದಿದೆ ಎಂದು ದೆಹಲಿ ಮೂಲಗಳು ಖಚಿತಪಡಿಸಿವೆ.
Panchajanya-II ರಿಪೀಟ್ ಷೋ ಪವಾಡ: ಹಾಗೆ ನೋಡಿದರೆ ಕಳೆದ ಬಾರಿ ಕೇಂದ್ರ ಸಂಪುಟಕ್ಕೆ ಸಣ್ಣ ಪ್ರಮಾಣದ ಸರ್ಜರಿ ನಡೆದಾಗಲೇ ಕೃಷ್ಣಗೆ ಕೊಕ್ ನೀಡಿ, ಕರ್ನಾಟಕಕ್ಕೆ ವಾಪಸ್ ಕಳಿಸುವ ಮಾತು ಕೇಳಿಬಂದಿತ್ತು. ಆದರೆ ಈಗ ಸಂಸತ್ ಅಧಿವೇಶನ ಸೆ.7ಕ್ಕೆ ಮುಗಿಯಲಿದ್ದು, ಎರಡನೇ ವಾರದಲ್ಲಿ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಯಲಿದೆ.
ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಾಸಿಗೆ ಹಿಡಿದಿರುವ ಕಾಂಗ್ರೆಸ್ ಗೆ ಜೀವ ತುಂಬಲು ಕೃಷ್ಣರನ್ನು ಬೆಂಗಳೂರಿಗೆ ವಾಪಸ್ ಕಳಿಸುವುದು ಬಹುತೇಖ ನಿಶ್ಚಯವಾಗಿದೆ ಎನ್ನಲಾಗಿದೆ.
ಚುನಾವಣೆಗೆ ಮುನ್ನ ಎಸ್ಎಂ ಕೃಷ್ಣ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವುದು. ಆ ಬಳಿಕ ಚುನಾವಣೆ ಫಲಿತಾಂಶವನ್ನು ನೋಡಿಕೊಂಡು ಕೃಷ್ಣರನ್ನೇ ಸಿಎಂ ಮಾಡುವ ಕುರಿತು ಪಕ್ಷದ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಈ ಮೂಲಗಳು ತಿಳಿಸಿವೆ.
1999ರಲ್ಲಿ ಕೃಷ್ಣ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದರು. ಆಗ ಪಂಚ ನಾಯಕರು 'ಪಾಂಚಜನ್ಯ' ಮೊಳಗಿಸಿ ಪಕ್ಷಕ್ಕೆ ಭರ್ಜರಿ ಗೆಲುವು ತಂದಿತ್ತಿದ್ದರು. ಹಾಗಾಗಿ, ಹೈಕಮಾಂಡ್ Panchajanya-II ರಿಪೀಟ್ ಷೋ ಪವಾಡಕ್ಕೆ ಕಾದುಕುಳಿತಿದೆ.












Click it and Unblock the Notifications