ಸಿಎಂಎಚ್ ರಸ್ತೆ ರಿಪೇರಿ ಕಾಮಗಾರಿ ಶೀಘ್ರ ಆರಂಭ

ಈ ರಸ್ತೆಯ ಅಕ್ಕಪಕ್ಕದಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟುಗಳು ತಲೆ ಎತ್ತಿವೆ, ಶಾಪಿಂಗ್ ಮಾಲ್ ನಿರ್ಮಾಣವಾಗಿವೆ, ಅನೇಕ ಸಾಫ್ಟ್ ವೇರ್ ಕಂಪನಿಗಳು ಕೂಡ ಇಲ್ಲಿ ಕಾರ್ಯನಿರತವಾಗಿವೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ನ್ಯೂ ಹಾರಿಜಾನ್ ಶಾಲೆ ಇದೇ ರಸ್ತೆಯಲ್ಲಿದೆ. ಹಳೆ ಮದ್ರಾಸ್ ರಸ್ತೆಯಿಂದ ಹಳೆ ಏರ್ಪೋರ್ಟ್ ತಲುಪಲು ಇದೇ ಪ್ರಮುಖ ಕೊಂಡಿಯಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಸಾಗುತ್ತಿವೆ.
ಆದರೆ, ಇಂದಿರಾನಗರದ ಪ್ರಮುಖ ರಸ್ತೆಯಾಗಿರುವ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯಾ? ಈ ಪ್ರಶ್ನೆ ಕೇಳಿದರು ಈ ರಸ್ತೆಯಲ್ಲಿ ಸಂಚರಿಸುವವರು, ಸುತ್ತಲಿನ ಬಡಾವಣೆಗಳಲ್ಲಿ ವಾಸಿಸುವ ನಾಗರಿಕರು ಸಿಡಿದೇಳುತ್ತಾರೆ. ಇಂಥದೊಂದು ಬಡಾವಣೆಯಲ್ಲಿ ಇಷ್ಟು ತೀರ ಹದಗೆಟ್ಟ ರಸ್ತೆ ಇರುವುದೇ ಇಂದಿರಾನಗರಕ್ಕೆ ಅವಮಾನ ಎಂಬಂತೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಗುಣಿಗಳು ಬಿದ್ದಿದ್ದು, ದ್ವಿಚಕ್ರ ವಾಹನದ ಚಾಲಕರು ಕೈಕಾಲು ಮುರಿದುಕೊಳ್ಳದೆ ಬಚಾವಾದರೆ ಅದೃಷ್ಟ ಎಂಬಂತಾಗಿದೆ. ಇನ್ನು ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುವುದು ಕಟ್ಟುನಿಟ್ಟಾಗಿ ನಿಷಿದ್ಧ.
ಶಾಸಕರು ಏನಂತಾರೆ? : ಕಳೆದರಡು ವರ್ಷಗಳಿಂದ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲ. ನಿರಂತರವಾಗಿ ಸಾಗುತ್ತಿರುವ ವಾಹನಗಳು ಹರಿದಾಟ ಮತ್ತು ಇತ್ತೀಚೆಗೆ ಸುರಿದ ಭಾರೀ ಮಳೆ ಈ ರಸ್ತೆಯನ್ನು ಸಂಚರಿಸಲಿಕ್ಕೇ ಅಯೋಗ್ಯವನ್ನಾಗಿ ಮಾಡಿದೆ. ಒನ್ಇಂಡಿಯಾ-ಕನ್ನಡದ ಓದುಗರನೇಕರು ನಮ್ಮೊಂದಿಗೆ ಗೋಳನ್ನು ತೋಡಿಕೊಂಡಿದ್ದಾರೆ. ಕನಿಷ್ಠಪಕ್ಷ ಈ ಕ್ಷೇತ್ರದ ಶಾಸಕರ ಗಮನಕ್ಕಾದರೂ ಈ ಸಮಸ್ಯೆಯನ್ನು ತಿಳಿಸಿ ಎಂದು ಕೇಳಿಕೊಂಡಿದ್ದಾರೆ.
ಅವರ ಕೋರಿಕೆಗೆ ಸ್ಪಂದಿಸಿದ ಒನ್ಇಂಡಿಯಾದ ಪ್ರತಿನಿಧಿ, ನೇರವಾಗಿ ಸಿ.ವಿ. ರಾಮನ್ ನಗರ ಕ್ಷೇತ್ರದ ಶಾಸಕ ಎಸ್ ರಘು ಅವರನ್ನೇ ಸಂಪರ್ಕಿಸಿ ಸಮಸ್ಯೆಯ ನಕಾಶೆಯನ್ನು ಅವರ ಮುಂದೆ ಬಿಡಿಸಿಟ್ಟಿತು. ಈ ಸಮಸ್ಯೆಯ ಅರಿವು ಅವರಿಗೂ ಇದ್ದು, ಕೆಲ ದಿನಗಳಲ್ಲಿಯೇ ರಸ್ತೆ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಅವರು ನೀಡಿರುವ ಆಶ್ವಾಸನೆ ನಂಬುವುದು ಸದ್ಯಕ್ಕೆ ನಾಗರಿಕರಿಗೆ ಇರುವ ಮಾರ್ಗ.
ಅವರು ಹೇಳುವುದೇನೆಂದರೆ, ನಮ್ಮ ಮೆಟ್ರೋ ಕಾಮಗಾರಿ ಇಲ್ಲಿ ಆರಂಭವಾದ ಮೇಲೆ ಆ ಸಂಸ್ಥೆಯೇ ಸಿಎಂಎಚ್ ರಸ್ತೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ವಹಿಸಬೇಕಾಗಿತ್ತು. ಆದರೆ, ನಮ್ಮ ಮೆಟ್ರೋದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ.
ಈಗಾಗಲೆ, ಆದರ್ಶ ಥಿಯೇಟರಿನಿಂದ ಹಿಡಿದು ಬಿಎಂಸಿ ವೃತ್ತದವರೆಗೆ ಹೊಸ ರಸ್ತೆ ನಿರ್ಮಿಸುವ ಯೋಜನೆಗೆ ಅಂಗೀಕಾರ ದೊರೆತಿದ್ದು, ಯಾವುದೇ ಕ್ಷಣದಲ್ಲಿ ಕೆಲಸ ಆರಂಭವಾಗಲಿದೆ. ಮಳೆಗಾಲ ಇನ್ನೂ ನಿಂತಿಲ್ಲದಿರುವುದರಿಂದ ಯೋಜನೆ ಆರಂಭಕ್ಕೆ ತುಸು ಹಿನ್ನಡೆಯುಂಟಾಗಿದೆ. ಸಿಎಂಎಚ್ ರಸ್ತೆ ಸಂಪೂರ್ಣವಾಗಿ ರಿಪೇರಿಯಾದ ನಂತರ ಅದರ ಅಕ್ಕಪಕ್ಕದಲ್ಲಿರುವ ರಸ್ತೆಗಳನ್ನೂ ಸಂಚಾರಯೋಗ್ಯವಾಗಿ ಮಾಡಲಾಗುವುದು ಎಂದು ಎಸ್. ರಘು ಅವರು ವಿಶ್ವಾಸದಿಂದ ಹೇಳುತ್ತಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ.57 ಸಿ.ವಿ.ರಾಮನ್ ನಗರದ ಕಾರ್ಪೋರೇಟರ್ ಎಂ.ಕೃಷ್ಣಪ್ಪ (93412 42523) ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಮೊಬೈಲ್ 'ನಾಟ್ ರೀಚೆಬಲ್' ಸಂದೇಶ ಒದರುತ್ತಿದೆ. ಸಿಎಂಎಚ್ ರಸ್ತೆ ರಿಪೇರಿ ಆಗುವವರೆಗೆ ಈ ಸಿ.ವಿ.ರಾಮನ್ ನಗರದ ಕಾರ್ಪೋರೇಟರ್ ಅವರನ್ನು ಸತತವಾಗಿ ಸಂಪರ್ಕಿಸಿ, ರಸ್ತೆ ರಿಪೇರಿ ಮಾಡಿಸಿಕೊಳ್ಳುವ ಜವಾಬ್ದಾರಿ ಆ ಕ್ಷೇತ್ರದ ನಾಗರಿಕರದು. ಇಲ್ಲದಿದ್ದರೆ ಮತ ಹಾಕಿ ಪ್ರಯೋಜನವಾದರೂ ಏನು? ಈ ರಸ್ತೆಯನ್ನು ರಿಪೇರಿ ಮಾಡಿದವರಿಗೆ ಮತ್ರವಲ್ಲ, ಅಧಿಕಾರಿಗಳಿಗೆ ಗಂಟುಬಿದ್ದು ರಿಪೇರಿ ಮಾಡಿಸಿದವರಿಗೂ ಪುಣ್ಯ ಬರುತ್ತದೆ.











Click it and Unblock the Notifications