ದಾನಧರ್ಮ ಅಂತ ಆ ಯುವತಿ ಬಸ್ಸನ್ನೇ ಎಳೆದಳು

indian-origin-asha-rani-pulls-uk-bus-by-hair
ಲಂಡನ್, ಆ.21: ಆಶಾರಾಣಿ ಹೆಸರೇ ಸೂಚಿಸುವಂತೆ ಭಾರತೀಯ ಮೂಲದ ಹೆಣ್ಣುಮಗಳು. ಈಕೆ ಪ್ರಸ್ತುತ ಲೈಸಿಸ್ಟರ್ ನಗರದಲ್ಲಿ ವಾಸವಾಗಿದ್ದಾಳೆ. ಈ ಹಿಂದೆ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಬಲ್ ಡೆಕ್ಕರ್ ಬಿಟಿಎಸ್ ನಂತಹ ಬಸ್ಸೊಂದನ್ನು ಈಕೆ ಮೊನ್ನೆ ಶನಿವಾರ 17 ಮೀಟರ್ ಮತ್ತು 20 ಸೆಂ ಮೀ. ದೂರವೆಳೆದು ಪರಾಕ್ರಮ ಮೆರೆದಿದ್ದಾಳೆ.

ಅದೇನು ಮಹಾಬಿಡಿ. ಈ ಹಿಂದೆ ಅಲ್ಲಲ್ಲಿ ನಿಂತುಬಿಡುತ್ತಿದ್ದ ಬಿಟಿಎಸ್ ಬಸ್ಸುಗಳನ್ನು ಹತ್ತಾರು ಮಂದಿ ಕೈಹಾಕಿ 'ತಳ್ಳು ಗೋವಿಂದಾ ತಳ್ಳು' ಎನ್ನುತ್ತಾ ತಳ್ಳಿಕೊಂಡು ಹೋಗಿ ಡಿಪೋ ತಲುಪಿಸುತ್ತಿದ್ದೆವು ಎನ್ನಬೇಡಿ. 21 ವರ್ಷದ ಆಶಾರಾಣಿ ಈ ಸಾಧನೆಯನ್ನು ಏಕಾಂಗಿಯಾಗಿ ಮಾಡಿದ್ದಾಳೆ. ಮತ್ತು ಹಾಗೆ ಭೀಮಾಕಾರದ ಬಸ್ಸನ್ನು ಆಕೆ ಎಳೆದಿರುವುದು ಯಃಕಶ್ಚಿತ್ ತನ್ನ ಜಡೆಗೂದಲಿನಿಂದ!

ಈ ದಾಖಲೆಯ ಸಾಧನೆಯನ್ನು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ ಮೂಕವಿಸ್ಮಿತರಾಗಿ ನೋಡುತ್ತಾ, ಶಹಬ್ಬಾಸ್ ಎಂದು ಅಪ್ರಯತ್ನವಾಗಿ ಹೇಳಿದ್ದಾರೆ. ಭಾರತದ ಈ 'ಉಕ್ಕಿನ ಮಹಿಳೆ'ಯನ್ನು ಇಂತಹ ಸಾಹಸಕ್ಕೆ ಸಜ್ಜುಗೊಳಿಸಿದ್ದು ಹೋಷಿಯಾರಪುರದ 62 ವರ್ಷದ ಮನಜೀತ್ ಸಿಂಗ್. ಈತ ಬೇರೆ ಯಾರೂ ಅಲ್ಲ, ತನ್ನ ಕಿವಿಗೆ ಹಗ್ಗ ಕಟ್ಟಿಕೊಂಡು ವಿಮಾನವನ್ನೇ ಎಳೆದಿದ್ದ ದೈತ್ಯ.

'ಇಂತಹ ವಿರಳ ಸಾಹಸಕ್ಕೆ ವಿಶೇಷ ಅಭ್ಯಾಸ, ತರಬೇತಿ ಮಾಡಬೇಕು ಅಂತೇನಿಲ್ಲ. ಇದು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಗೆ ಹೆಚ್ಚು ಸಂಬಂಧಪಟ್ಟಿದ್ದು. (ಆಶಾ ಸಾಧನೆ ನೋಡಿದರೆ ಕೇಶ ಶಕ್ತಿಯ ಮುಂದೆ ಯಾವುದೂ ಇಲ್ಲ ಎನ್ನಬಹುದು!) ಆಶಾ ಮೂರ್ನಾಲ್ಕು ವರ್ಷಗಳ ಹಿಂದೆ ಹಾಗೇ ಸುಮ್ಮನೆ ಅಭ್ಯಾಸದಲ್ಲಿ ತೊಡಗಿದಳು. ಇಂದು ನನ್ನನ್ನೇ ಮೀರಿಸುವಷ್ಟು ಗಟ್ಟಿಯಾಗಿದ್ದಾಳೆ' ಎಂದು ಆಶಾಳನ್ನುದ್ದೇಶಿಸಿ ಮನಜೀತ್ ಅಭಿಮಾನದ ಮಾತುಗಳನ್ನು ಹೇಳಿದ್ದಾರೆ.

ಮನಜೀತ್ ಅವರು ಪಂಜಾಬಿನಲ್ಲಿ ಪೊಲೀಸ್ ಪೇದೆಯಾಗಿದ್ದವರು. 1977ರಲ್ಲೇ ಬ್ರಿಟನ್ನಿಗೆ ವಲಸೆ ಹೊರಟರು. ಅಲ್ಲಿ ಬರೀ ಇಂಥವೇ ಸಾಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮನಜೀತ್ ಸಿಂಗ್ ಅವರ ಹೆಸರಿನಲ್ಲಿ ಈಗಾಗಲೇ ಅನೇಕ ಗಿನ್ನಿಸ್ ದಾಖಲೆಗಳಿವೆ. ಆಶಾ ಸಹ ಅಂತಹ ಒಂದು ದಾಖಲೆಗೆ ಈಗ ರಾಣಿಯಾಗಿದ್ದಾರೆ.

ಅಂದಹಾಗೆ, ಆಶಾರಾಣಿ ಇಂತಹ ಸಾಹಸಕ್ಕೆ ಕೈಹಾಕಿದ್ದು ಯಾಕಪ್ಪಾ ಅಂದರೆ ಜನನಾಂಗ ಕ್ಯಾನ್ಸರ್ (prostate cancer) ಬಗ್ಗೆ ಅರಿವು ಮೂಡಿಸಲು ಮತ್ತು ಈ ಗಿನ್ನಿಸ್ ದಾಖಲೆಯಿಂದ ಬಂದ ಹಣವನ್ನು ಜನನಾಂಗ ಕ್ಯಾನ್ಸರ್ ರೋಗಿಗಳಿಗೆ ವಿನಿಯೋಗಿಸಲು ಅವರು ನಿರ್ಧರಿಸಿದ್ದಾರೆ. ಓ ಕೇಶಾಯ ನಮಃ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+