ಕಾಟನ್ ಪೇಟೆ ದಂಪತಿ ಹತ್ಯೆ: ಕೊಲೆಗಡುಕರ ಬಂಧನ

blore-cottonpet-hotel-couple-pawan-murder-case-solved
ಬೆಂಗಳೂರು, ಆ. 8: ಎಲ್ಲಿಂದಲೋ ಬಂದು ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುತ್ತಿದ್ದ ಹೋಟೆಲ್ ಮಾಲೀಕ ದಂಪತಿಯನ್ನು ಹತ್ಯೆ ಮಾಡಿದ್ದೂ ಅಲ್ಲದೆ ನಿಷ್ಪಾಪಿ ಕಂದನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ ಪಾಪಿಗಳನ್ನು ಘಟನೆ ನಡೆದ ಒಂದು ವಾರದೊಳಗೆ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಅನ್ನ ಕೊಟ್ಟ ಮಾಲೀಕನನ್ನು ಕೊಂದವರು ಯಾರು, ಅವನಿಗೆ ಸಹಕರಿಸಿದವರು ಯಾರು, ಯಾವ ಕಾರಣಕ್ಕಾಗಿ ಮತ್ತು ಹೇಗೆ ಹತ್ಯೆಯಾಯಿತು ಎಂಬುದರ ವಿವರ ಇಲ್ಲಿದೆ: ಆದಕ್ಕೂ ಮುನ್ನ

ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೊಂದು ಹ್ಯಾಟ್ಸ್ ಆಫ್ ಹೇಳೊಣ: ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಪ್ರಣವ್ ಮೊಹಂತಿ, ಡಿಸಿಪಿ ಎಸ್ಎನ್ ಸಿದ್ರಾಮಪ್ಪ, ಇನ್ಸ್ ಪೆಕ್ಟರ್ ನೂರುಲ್ಲಾ, ಕೆಪಿ ಸತ್ಯನಾರಾಯಣ, ಶ್ರೀಧರ್ ಪೂಜಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸಿದ್ದೇಶ್.

ರಾಜಧಾನಿಯ ಅತ್ಯಂತ ಜನನಿಬಿಡ ಪ್ರದೇಶವಾದ ಕಾಟನ್ ಪೇಟೆಯಲ್ಲಿರುವ ಮಹಾಲಕ್ಷ್ಮಿ ಹೋಟೆಲಿನ ಮಾಲೀಕ ಮತ್ತು ಅವರ ಪತ್ನಿಯನ್ನು ಬರ್ಬರವಾಗಿ ಮಂಗಳವಾರ ರಾತ್ರಿ (ಜುಲೈ 31 ) ಭೀಕರವಾಗಿ ಸಾಯಿಸಲಾಗಿತ್ತು. ದಂಪತಿಯ ಚಿಕ್ಕ ಮಗುವಿನ ಮೇಲೆಯೂ ಹಲ್ಲೆಯಾಗಿದ್ದು, ಆ ಮಗು ಈಗ ಚೇತರಿಸಿಕೊಳ್ಳುತ್ತಿದೆ.

ಮೂಲತಃ ಆಗ್ರಾದವರಾದ ಪವನ್ ಕುಮಾರ್ ಮಹೇಶ್ವರಿ ಶರ್ಮಾ (45) ಮತ್ತು ಬಬಿತಾ ದೇವಿ (40) ದಂಪತಿ ಹತ್ಯೆಗೀಡಾಗಿದ್ದವರು. ಇವರ ಸಾಕು ಮಗಳು 6 ವರ್ಷದ ಶಿಲ್ಪಾ ಹತ್ಯೆ ವೇಳೆ ಹಲ್ಲೆಗೀಡಾಗಿದ್ದ ಮಗು.

ಪ್ರಕರಣದ ಪ್ರಮುಖ ಆರೋಪಿ ಸೈಯದ್ ಅಲಿ ಅಲಿಯಾಸ್ ಕಾರ್ತಿಕ್. ಅಸ್ಸಾಂ ಅಥವಾ ಬಿಹಾರ ಮೂಲದವನಿರಬೇಕು. ಇವನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಇವನಿಗೆ ಸಹಕರಿಸಿ ಈಗ ಬಂಧನಕ್ಕೊಳಗಾದ ಪಾತಕಿಗಳು ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದ ನಿವಾಸಿ, ಹಿಜಡಾ ಪಿ.ಕೆ. ತಮ್ಮಯ್ಯ ಅಲಿಯಾಸ್ ಕಿರಣ್ (24) ಮತ್ತು ಮಂಗಳೂರಿನ ಕುತ್ತೆತ್ತೂರು ಗ್ರಾಮದ ರಮೇಶ್ ಅಲಿಯಾಸ್ ರವಿ (26).

ಹಣಕ್ಕಾಗಿ ಕೊಲೆ
ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸುದ್ದಿಗೋಷ್ಠಿಯಲ್ಲಿ ನೀಡಿರುವ ಪ್ರಕರಣದ ವಿವರ- ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕ್ ತಾನು ಸೈಯದ್ ಅಲಿ ಎಂಬುದನ್ನು ಮರೆಮಾಚಿ, ಪಂಕಜ್ ಮತ್ತು ಬಬಿತಾ ದಂಪತಿಯ ವಿಶ್ವಾಸ ಗಿಟ್ಟಿಸಿ, 'ಮಹಾಲಕ್ಷ್ಮಿ ಪ್ಯೂರ್ ವೆಜ್' ಹೋಟೆಲಿನಲ್ಲಿ ಅಡುಗೆ ಕೆಲಸಕ್ಕೆ ಜು. 29ರಂದು ಅಂದರೆ ಹತ್ಯೆಗೆ ಮೂರು ದಿನ ಮುನ್ನ ಸೇರಿಕೊಳ್ಳುತ್ತಾನೆ.

ಅದಕ್ಕೂ ಮುನ್ನ, ಕೂಲಿ ಕೆಲಸ ಮಾಡುತ್ತಿದ್ದ ಸೈಯದ್ ಅಲಿ, ಪ್ರತಿನಿತ್ಯ ಮಹಾಲಕ್ಷ್ಮಿ ಹೋಟೆಲಿಗೆ ಊಟಕ್ಕೆ ಬರುತ್ತಿದ್ದ. ಮಾಲೀಕರ ಬಳಿ ಹಣ ಇರುವುದನ್ನು ಗಮನಿಸಿದ ಸೈಯದ್, ಅದನ್ನು ದೋಚಲು ಸಂಚು ರೂಪಿಸಿದ್ದ. ಅದಕ್ಕಾಗಿ ಈ ಹಿಂದೆ ರೈಲು ನಿಲ್ದಾಣದಲ್ಲಿ ತನಗೆ ಗೆಳೆಯರಾಗಿದ್ದ ತಮ್ಮಯ್ಯ ಮತ್ತು ರಮೇಶ್ ಅವರ ನೆರವನ್ನೂ ಪಡೆಯುತ್ತಾನೆ.

ಮಂಗಳವಾರ (ಜುಲೈ 31) ಮಾಲೀಕ ದಂಪತಿಯು ಮಗುವಿನೊಂದಿಗೆ ಕೊಠಡಿಯಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಸೈಯದ್, ತನ್ನ ಸಹಚರರಾದ ಇತರೆ ಆರೋಪಿಗಳಿಗೆ ಸುಳಿವು ನೀಡಿದ್ದಾನೆ. ಅರ್ಧ ಷೆಟರ್ ತೆಗೆದು ಆರೋಪಿಗಳನ್ನು ಹೋಟೆಲ್ ಒಳಕ್ಕೆ ಕರೆದುಕೊಳ್ಳುವ ಸಮಯದಲ್ಲಿ ಹೋಟೆಲ್ ಬಳಿ ಚೀತಾ ವಾಹನ ಬಂದ ಕಾರಣ ತಮ್ಮಯ್ಯ ಮತ್ತು ರಮೇಶ್ ಅಲ್ಲಿಂದ ಕಬ್ಬನ್‌ಪಾರ್ಕ್‌ಗೆ ಓಡಿ ಹೋಗಿದ್ದರು.

ಆರೋಪಿಗಳು ಮತ್ತೆ ಎರಡು ಗಂಟೆ ಸುಮಾರಿಗೆ ಬಂದು ಕೃತ್ಯ ಎಸಗಿದ್ದಾರೆ. ಕೊಲೆಗೂ ಮುನ್ನ ಆರೋಪಿ ಸೈಯದ್, ಬಬಿತಾ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅವರ ಪತಿ ಪಂಕಜ್ ಕುಮಾರ್ ಎಚ್ಚರಗೊಂಡಿದ್ದಾರೆ.

ಆಗ ಮತ್ತೊಬ್ಬ ಆರೋಪಿ ತಮ್ಮಯ್ಯ ಹಾಗೂ ಸೈಯದ್ ಕಬ್ಬಿಣದ ಸಲಾಕೆಯಿಂದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಘಟನೆ ವೇಳೆ ಇನ್ನೊಬ್ಬ ಆರೋಪಿ ರಮೇಶ್ ಹೋಟೆಲ್‌ನ ಹೊರಗೆ ನಿಂತು ಕಾಯುತ್ತಿದ್ದ. ಅಪ್ಪ-ಅಮ್ಮನ ಚೀರಾಟದಿಂದ ಎಚ್ಚರಗೊಂಡ ಐದು ವರ್ಷದ ಮಗು ಪ್ರಿಯಾಳ ತಲೆಗೂ ಆರೋಪಿಗಳು ಸಲಾಕೆಯಿಂದ ಹೊಡೆದು, 48 ಸಾವಿರ ರೂಪಾಯಿ ಹಣ ದೋಚಿ ಪರಾರಿಯಾಗುತ್ತಾರೆ.

ಸುಳಿವು ಸಿಕ್ಕಿದ್ದು ಹೇಗೆ?
ಅಕ್ಕಪಕ್ಕದವರಿಂದ ಉತ್ತಮರು ಎಂದು ಗುರುತಿಸಿಕೊಂಡಿದ್ದ ದಂಪತಿಯ ಹತ್ಯೆ ಮತ್ತು ಅಮಾಯಕ ಮಗುವಿನ ಮೇಲಾಗಿರುವ ಹಲ್ಲೆಯ ಬಗ್ಗೆ ಪೊಲೀಸರು ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು. ಅದಕ್ಕಾಗಿ ಘಟನಾ ಸ್ಥಳದಲ್ಲಿ ಇಂಚಿಂಚು ಜಾಲಾಡುತ್ತಾರೆ. ಆಗ ಆರೋಪಿಗಳ ಬಗ್ಗೆ ಸುಳಿವು ನೀಡಬಹುದಾದ ಕಾಗದದ ಚೂರೊಂದು ಅವರ ಕಣ್ಣಿಗೆ ಬೀಳುತ್ತದೆ. ಅದನ್ನೇ ಜೋಪಾನವಾಗಿ ಎತ್ತಿಟ್ಟುಕೊಂಡ ಪೊಲೀಸರು ತಕ್ಷಣ ತಮ್ಮ ಕಾರ್ಯಾಚರಣೆಗೆ ಇಳಿಯುತ್ತಾರೆ.

ತುಂಡು ಕಾಗದದಲ್ಲಿದ್ದ ಮೂರ್ನಾಲ್ಕು ಫೋನ್ ನಂಬರ್‌ಗಳಿಗೆ ಕಿವಿಯಾಗುತ್ತಾರೆ. ಹೋಟೆಲ್ ಪಕ್ಕದಲ್ಲೇ ಇದ್ದ ಎಸ್‌ಟಿಡಿ ಬೂತ್‌ನ ಕರೆಯ ವಿವರಗಳನ್ನು ಪರಿಶೀಲಿಸಿದಾಗ ಚೀಟಿಯಲ್ಲಿದ್ದ ಮೊಬೈಲ್ ಸಂಖ್ಯೆಗೆ ಕೊಲೆ ನಡೆದ ಸಮಯದಲ್ಲೇ ಕರೆ ಹೋಗಿರುವುದು ಗೊತ್ತಾಗಿ ಹೋಗುತ್ತದೆ. ಅಲ್ಲಿಗೆ ಪೊಲೀಸರ ಕೆಲಸ ಅರ್ಧ ಸಲೀಸಾಗುತ್ತದೆ. ಮುಂದೆ, ಆ ಸಂಖ್ಯೆಗೆ ಬಂದು ಹೋಗಿರುವ ಕರೆಯ ವಿವರಗಳ ಬೆನ್ನು ಹತ್ತುತ್ತಾರೆ. ಆಗ ಆರೋಪಿ ತಮ್ಮಯ್ಯ ಸಿಕ್ಕಿ ಬೀಳುತ್ತಾನೆ. ಅವನು ನೀಡಿದ ಮಾಹಿತಿಯಿಂದ ರಮೇಶನನ್ನು ಬಂಧಿಸುತ್ತಾರೆ.

ಹತ್ಯೆಯ ಸೂತ್ರಧಾರ ಸೈಯದ್ ಬಳಿ ಮೊಬೈಲ್ ಇರುವುದಿಲ್ಲ. ಹಾಗಾಗಿ, ತಮ್ಮಯ್ಯನ ಮೊಬೈಲ್ ಸಂಖ್ಯೆಯನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿರುತ್ತಾನೆ. ಕೃತ್ಯದ ವೇಳೆ ಹೊರಗೆ ಕಾಯುತ್ತಾ ನಿಂತಿದ್ದ ರಮೇಶ್, ಸಹಚರರು ಹೋಟೆಲ್‌ನಿಂದ ಹೊರಬಾರದ ಕಾರಣ ಎಸ್‌ಟಿಡಿ ಬೂತ್‌ನಿಂದ ತಮ್ಮಯ್ಯನ ಮೊಬೈಲ್‌ಗೆ ಕರೆ ಮಾಡುತ್ತಾನೆ. ಅದೇ ಪೊಲೀಸರಿಗೆ ಸಿಕ್ಕ ಮಹತ್ವದ ಸುಳಿವು.

ನವ ವಿವಾಹಿತರಂತಿದ್ದರು!
'ಆರೋಪಿ ರಮೇಶ್ ಮತ್ತು ಹಿಜಡಾ ತಮ್ಮಯ್ಯ ನವ ವಿವಾಹಿತರಂತೆ ಇದ್ದರು. ಕಬ್ಬನ್‌ಪಾರ್ಕ್, ಎಂ.ಜಿ. ರಸ್ತೆಯಲ್ಲಿ ಜತೆ ಜತೆಗೆ ತಿರುಗಾಡುತ್ತಿದ್ದರು. ತಮ್ಮಯ್ಯ ಭಿಕ್ಷೆ ಬೇಡುತ್ತಿದ್ದ. ಆದರೆ, ರಮೇಶ ಹಣದ ಅಗತ್ಯವಿದ್ದಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+