ಮತ್ತೆ ಧರ್ಮಸ್ಥಳ ಮಂಜುನಾಥನ ಮೇಲೆ ಹೆಸರಿಟ್ಟ ಶಾಸಕ

ಮಂಗಳೂರು ಹೋಮ್ ಸ್ಟೇ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬಂಗೇರಾ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಡಳಿತ ಯಂತ್ರ ಎನ್ನುವುದು ಇಲ್ಲವೇ ಇಲ್ಲ. ಅಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಭಜರಂಗದಳದ ಪುಂಡಾಟಿಕೆಯಿಂದ ಸ್ತ್ರೀಯರಿಗೆ ಭಯಭೀತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ದಕ್ಷಿಣಕನ್ನಡ ಭಾಗದಲ್ಲಿ ಹಿಂದೂಪರ ಸಂಘಟನೆಗಳದ್ದೇ ಕಾರುಬಾರು. ಕಲ್ಲಡ್ಕ ಪ್ರಭಾಕರ್ ಭಟ್ಟರೇ ಪೋಲೀಸ್ ಮುಖ್ಯಸ್ಥರು. ಎಲ್ಲಾ ಭಟ್ಟರ ಅಣತಿಯಂತೆ ನಮ್ಮ ಜಿಲ್ಲೆಯಲ್ಲಿ ನಡೆಯುತ್ತದೆ ಎನ್ನುವುದು ಬೇಸರ ತರುವ ಸಂಗತಿ. ಜನಪ್ರತಿನಿಧಿಗಳಾದ ನಮಗೆ ಬೆಲೆಯಿಲ್ಲದಂತಾಗಿದೆ ಎಂದು ಬಂಗೇರಾ ಸದನದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಭಜರಂಗದ ದಳದ ಕಾರ್ಯಕರ್ತರು ರಾತ್ರಿ ಹೊತ್ತು ತಲವಾರ್, ಕೋವಿ ಇಟ್ಟುಕೊಂಡು ಓಡಾಡುತ್ತಾರೆ. ನಾನು ಹೇಳಿದ ಯಾವುದೇ ಮಾತನ್ನು ನಾನು ಹಿಂದಕ್ಕೆ ತೆಗೆದುಕೊಳ್ಳಲಾರೆ. ಒಂದು ವೇಳೆ ನಾನು ನೀಡಿದ ಹೇಳಿಕೆಯಲ್ಲಿ ಯಾವುದಾದರೂ ಸುಳ್ಳು ಹೇಳಿಕೆ ಇದ್ದರೆ ನಾಡಿನ ಧರ್ಮದೇಗುಲದ ಧರ್ಮಸ್ಥಳ ಮಂಜುನಾಥನೇ ನನಗೆ ಶಿಕ್ಷೆ ನೀಡಲಿ ಎಂದು ಶಾಸಕ ವಸಂತ್ ಬಂಗೇರಾ ಹೇಳಿಕೆ ನೀಡಿ ಭಾವೋದ್ವೇಗಕ್ಕೆ ಒಳಗಾದರು.
ನಾನೂ ಒಬ್ಬ ಹೆಣ್ಣು ಮಗಳ ತಂದೆ. ಸದನದಲ್ಲಿರುವ ಸದಸ್ಯರಿಗೆ ಅಕ್ಕ, ತಂಗಿ ಯಾರೂ ಇಲ್ಲವೇ? ಮಾನ ಮರ್ಯಾದೆ ಎನ್ನುವುದು ಬಡವರಿಗೂ ಶ್ರೀಮಂತರಿಗೂ ಒಂದೇ ಅಲ್ಲವೇ. ನನ್ನ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳಿಂದ ಮನನೊಂದಿದ್ದೇನೆ. ಈ ರಾಜಕೀಯ ಸಾಕೆನಿಸಿದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವು ನಿರ್ಧಾರಕ್ಕೆ ಬಂದಿದ್ದೇನೆ ಎಂದು ಶಾಸಕ ಬಂಗೇರಾ ಹೇಳಿಕೆ ನೀಡಿ ಕಣ್ಣೀರಿಟ್ಟಿದ್ದಾರೆ.
ಕೆಂಡಾಮಂಡಲವಾದ ಯಡಿಯೂರಪ್ಪ: ಕಲ್ಲಡ್ಕ ಪ್ರಭಾಕರ್ ಭಟ್ಟರ ಹೆಸರನ್ನು ವಸಂತ್ ಬಂಗೇರಾ ಪ್ರಸ್ತಾಪಿಸಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ತಮ್ಮ ಕೈಯಲ್ಲಿದ್ದ ಹೆಡ್ ಸೆಟ್ ಅನ್ನು ಕುಕ್ಕಿ ಬಂಗೇರಾ ಅವರ ಹೇಳಿಕೆಯನ್ನು ಕಡತದಿಂದ ಈ ಕೂಡಲೇ ತೆಗೆದು ಹಾಕುವಂತೆ ಸ್ಪೀಕರ್ ಬೋಪಯ್ಯ ಅವರನ್ನು ಆಗ್ರಹಿಸಿದ್ದಾರೆ.











Click it and Unblock the Notifications