ಬೆಂಗಳೂರಲ್ಲಿ ಬಾಲಕನ ಬಲಿಗೆ ಯತ್ನಿಸಿದ ಪೂಜಾರಿ ಬಂಧನ

Posted By:
Subscribe to Oneindia Kannada
Poojary tries to sacrifice child
ಬೆಂಗಳೂರು, ಜು. 12 : ನಿಧಿಯ ಆಸೆಯಾಗಿ ಪುಟ್ಟ ಬಾಲಕನನ್ನು ಹೊತ್ತೊಯ್ದು ಬಲಿ ನೀಡಲು ಯತ್ನಿಸಿ, ಪೂಜಾರಿಯೊಬ್ಬ ಸಾರ್ವಜನಿಕರಿಂದ ತೀವ್ರ ಥಳಿತಕ್ಕೊಳಗಾದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಚಂದ್ರನಗರದಲ್ಲಿ ಗುರುವಾರ ನಡೆದಿದೆ.

ದೇವಸ್ಥಾನವೊಂದರಲ್ಲಿ ಪೂಜೆ ಮಾಡುತ್ತಿದ್ದ ಸುಮತೀಂದ್ರ ರಾವ್ ಎಂಬುವವರೇ ಈಗ ಪೊಲೀಸರ ವಶವಾಗಿರುವ ಪೂಜಾರಿ. ಆ ಕಳ್ಳ ಪೂಜಾರಿಯಿಂತ ಅಪಹರಣಕ್ಕೊಳಗಾಗಿ, ಅದೃಷ್ಟವಶಾತ್ ಪಾರಾಗಿ ಬಂದ ಪುಟ್ಟ 2 ವರ್ಷದ ಮಗುವಿನ ಹೆಸರು ವಿನಯ್.

ಅಜ್ಜಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ವಿನಯ್‌ನನ್ನು ಕಿತ್ತುಕೊಂಡು ಹೋದ ಸುಮತೀಂದ್ರ ರಾವ್, ಚಂದ್ರನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ, ನಿಧಿಯ ಆಸೆಗಾಗಿ ಬಲಿ ನೀಡಲು ಎಲ್ಲ ಸಿದ್ಧತೆ ನಡೆಸಿದ್ದ. ಮಗುವಿನ ಕತ್ತಿಗೆ ಕೆಂಪು ಬಣ್ಣದ ಬಟ್ಟೆ ಸುತ್ತಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಬಲಿ ನೀಡಲು ತಯಾರಿ ನಡೆಸಿದ್ದ.

ಅಷ್ಟರಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಮಗುವಿನ ಅಜ್ಜಿಯೂ ಓಡೋಡಿ ಬಂದಿದ್ದಾಳೆ. ಮಗುವಿನ ರಕ್ಷಣೆಗೆ ಧಾವಿಸಿದ ಸಾರ್ವಜನಿಕರು ಸುಮತೀಂದ್ರ ರಾವ್ ಅವರಿಗೆ ಮನೆಯ ಬಾಗಿಲು ತೆರೆಯುವಂತೆ ಕೋರಿದ್ದಾರೆ. ಆತ ಸ್ಪಂದಿಸದಿದ್ದಾಗ ಬಾಗಿಲು ಮುರಿದು ಮನೆ ಒಳಹೊಕ್ಕಿದ್ದಾರೆ. ಇನ್ನೇನು ಬಲಿಯಾಗಬೇಕಿದ್ದ ವಿನಯ್ ಅದೃಷ್ಟವಶಾತ್ ಪಾರಾಗಿದ್ದಾನೆ.

ಸಾರ್ವಜನಿಕರು ಇಷ್ಟಕ್ಕೆ ಬಿಟ್ಟಿಲ್ಲ. ಮಗುವನ್ನು ಬಲಿ ನೀಡಲು ಪ್ರಯತ್ನಿಸುತ್ತಿದ್ದ ಪೂಜಾರಿಯನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನೊಂದಿಗೆ ಪೂಜಾರಿಯ ಹೆಂಡತಿಯೂ ಇದ್ದಳು. ಇಬ್ಬರನ್ನೂ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನೆರೆಹೊರೆಯವರ ಪ್ರಕಾರ, ಸುಮತೀಂದ್ರ ರಾವ್ ಒಬ್ಬ ಸಾತ್ವಿಕ ವ್ಯಕ್ತಿಯೆಂದೇ ಗುರುತಿಸಿದ್ದ. ಅಕ್ಕಪಕ್ಕದಲ್ಲಿದ್ದ ಮಕ್ಕಳಿಗೆ ಚಾಕಲೇಟು, ಬಿಸ್ಕತ್ತುಗಳನ್ನು ಆಗಾಗ ಕೊಡುತ್ತಿದ್ದ. ಆದರೆ, ಈತ ಮಗುವನ್ನು ಅಪಹರಿಸಿ ಬಲಿ ಕೊಡಲು ಯತ್ನಿಸುವ ದುಷ್ಕೃತ್ಯಕ್ಕೆ ಕೈಹಾಕುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A temple poojary has been thrashed by public and handed over to police for trying to sacrifice 2-year-old boy for the greed of treasure. The incident has happened in Chandra Nagar in Kumaraswamy layout in Bangalore on July 12, 2012, Thursday.
Please Wait while comments are loading...