ಬೆವರು ಸುರಿಸಿ ಕಟ್ಟಿದ್ದ ರೆಡ್ಡಿಯ ಕುಟೀರ ನೆಲಸಮ

Posted By:
Subscribe to Oneindia Kannada
janardhan-reddy-bellary-kuteera-demolished
ಬಳ್ಳಾರಿ, ಜುಲೈ 12: ಪಾಪ ಆ ಮನೆಯ ಯಜಮಾನ ಎಷ್ಟೆಲ್ಲ ಬೆವರು ಸುರಿಸಿ ಆ ಮನೆಯನ್ನು ಕಟ್ಟಿದ್ದರೋ, ಎಷ್ಟು ಮಂದಿ ಅಸಹಾಯಕರ ಕಣ್ಣೀರು ಹರಿದಿತ್ತೋ, ಎಷ್ಟು ಮಂದಿ ನಿಸ್ಸಹಾಯಕರ ಶಾಪ ಆ ಮನೆಯ ಮೇಲೆ ಬಿದ್ದತ್ತೋ... ಅಂತೂ ಇಡೀ ಊರಿಗೆ ಹೆಗ್ಗುರುತಾಗಿ ಎದ್ದುನಿಂತಿದ್ದ ಆ ಮನೆಯ ಗುರುತೂ ಸಿಗದಂತೆ ಕಣಕಣವೂ ನೆಲಸಮವಾಗಿದೆ.

ವಿಷಯ ಏನಪಾ ಅಂದರೆ ಸುಮಾರು 2 ತಿಂಗಳ ಹಿಂದೆಯೇ ಹೇಳಿದಂತೆ, ಅತ್ತ ತನ್ನ ಜಾಮೀನಿಗಾಗಿ 'ಶ್ರಮಿಸಿದ' ಒಬ್ಬೊಬ್ಬೇ ಜಡ್ಜುಗಳನ್ನು ಜನಾರ್ದನ ರೆಡ್ಡಿ ತನ್ನಂತೆ ಜೈಲಿಗೆಳೆದುಕೊಳ್ಳುತ್ತಿರುವ ಇತ್ತ ಅವರ ಆಶಾಸೌಧ ಕುಟೀರ ಸಂಪೂರ್ಣಾವಾಗಿ ನೆಲಕಚ್ಚಿದೆ. ಬಳ್ಳಾರಿಯ ಮಂದಿ 'ಜೈಲು ಜನಾರ್ದನನ ಮನೆ ಬೀಳಿಸಿಬಿಟ್ಟರಂತೆ' ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಕಾನೂನು ಸಂಕೋಲೆಯಲ್ಲಿ ಬಂಧಿಯಾಗಿರುವ ಕರ್ನಾಟಕದ ಮಾಜಿ ಸಚಿವ ಬಳ್ಳಾರಿಯ ಮುಕುಟವಿಲ್ಲದ ಮಹಾರಾಜ ಜನಾರ್ದನ ರೆಡ್ಡಿ ಅತ್ಯಂತ ಜತನದಿಂದ ಕಟ್ಟಿಸಿದ್ದ ಪುಟ್ಟ 'ಕುಟೀರ'ವನ್ನು ಮೂರು ದಿನಗಳ ಹಿಂದೆ ಒಂದಿಂಚೂ ಬಿಡದಂತೆ ಬೀಳಿಸಲಾಗಿದೆ. ಇದಕ್ಕೆ ರೆಡ್ಡಿ ಸೋದರರು ಕೊಟ್ಟಿರುವ ಕಾರಣ ವಾಸ್ತದೋಷ.

'ಕುಟೀರದಲ್ಲಿನ ವಾಸ್ತು ದೋಷದಿಂದಲೇ ರೆಡ್ಡಿ ಕುಟುಂಬಕ್ಕೆ ಎಡವಟ್ಟಾಗಿರುವುದರು. ಮೊದಲು ಅದನ್ನು ಬೀಳಿಸಿಬಿಡಿ. ಎಲ್ಲ ಸರಿಹೋಗುತ್ತದೆ. ಅದು ಧರಾಶಾಯಿಯಾಗುತ್ತಿದ್ದಂತೆ ಧರಾಶಾಯಿಯಾಗಿರುವ ಮನೆಯ ಒಡೆಯನಿಗೆ ಗುರುಬಲ ಬಂದು ಮೊದಲಿನಂತೆ ವಿಜೃಂಭಿಸಲಿದ್ದಾರೆ' ಎಂದು ಜ್ಯೋತಿಷಿಗಳು ಯಾರೋ ಹೇಳಿದ್ದರಿಂದ ಆ ಇಡೀ ಮನೆಯನ್ನು ಈಗ ನೆಲಸಮ ಮಾಡಲಾಗಿದೆ.

ವಾಸ್ತವವಾಗಿ, ವಾಸ್ತುಶಾಸ್ತ್ರಜ್ಞರು ಯಾವುದೇ ಮನಗೆ ನುಗ್ಗಿದರೆ ಮನೆಯನ್ನು ಅವಲೋಕಿಸುತ್ತಾ 'ಬಾತ್ ರೂಮನ್ನು ಮೊದಲು ಬೀಳಿಸಿ, ಅದು ದೇವ ಮೂಲೆಯಲ್ಲಿದೆ. ಇನ್ನು ಆ ಬೀರುವನ್ನು ಉತ್ತರಕ್ಕೆ ತಿರುಗಿಸಿ, ಅಯ್ಯೋ ಮನೆ ಯಜಮಾನ ಮಲಗುವ ಕೋಣೆ ಯಾಕೆ ಆ ಮೂಲೆಗಿದೆ. ಅದನ್ನು ಈ ದಿಕ್ಕಿಗೆ ಮಾಡಿಕೊಳ್ಳಿ' ಎಂದು 'ಉಚಿತ' ಸಲಹೆ ನೀಡುವುದು ಸರ್ವೇಸಾಮಾನ್ಯ.

ಮತ್ತು, ರೆಡ್ಡಿ ಕುಟೀರದಲ್ಲೂ ಹಾಗೇ ಆಗಿತ್ತು. ಮೊದಲು 'ಒಂದು ಗೋಡೆ ಬೀಳಿಸಿ ಸಾಕು' ಎಂದರು ಜ್ಯೋತಿಷ್ಯ ಶ್ರೇಷ್ಠರು. ನಂತರ ಮಗದೊಬ್ಬರು ತಮ್ಮದೂ ಇರಲಿ ಕಾಣಿಕೆ ಎಂದು 'ನೋಡಿ, ಆ ಅಡುಗೆ ಮನೆಯನ್ನು ಕೆಡವಿ' ಎಂದರು. ಮತ್ತೂ ಒಬ್ಬರು' ವರಾಂಡ ಮೇಲಿರುವ ರೂಮಿನ ವಾಸ್ತು ಸರಿಯಿಲ್ಲ' ಎಂದು ಹೇಳಿದ್ದರಂತೆ.

ಅದರಂತೆ ರೆಡ್ಡಿಗಾರು ಆರಂಭದಲ್ಲಿ ಒಂದೊಂದೇ ಭಾಗವನ್ನು ಕೆಡವುತ್ತಾ ಬಂದರು.ಕೊನೆಗೆ ಇಡೀ ಮನೆಯನ್ನೇ ಕೆಡವಿ ಬಿಡಿ ಎಂದು ಯಾರೋ ಸಲಹೆ ನೀಡಿದರಂತೆ. ಅದಕ್ಕೇಯಾ ಇಡೀ ಮೆನೆಯನ್ನು ಇಂದಿನ ರೆಡ್ಡಿಯ ಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಕೆಡವಿ ಹಾಕಲಾಗಿದೆ. ಮತ್ತೆ ಅದೇ ಸ್ಥಳದಲ್ಲಿ ಚೆಂದದ ಮನೆಯನ್ನು, ಬದುಕನ್ನು ಕಟ್ಟಿಕೊಳ್ಳುವ ಇರಾದೆ ರೆಡ್ಡಿ ಕುಟುಂಬದ್ದು. ಅವರಿಗೆ ಶುಭವಾಗಲಿ!

ಮರೆತ ಮಾತು: ಬಳ್ಳಾರಿಯ ತೆಲುಗು ಮಂದಿಯಲ್ಲೂ ಒಂದು ರೀತಿಯ ನಂಬಿಕೆ ಇದೆ. ಏನಪಾ ಅಂದರೆ ಮನೆಯ ಯಜಮಾನ ಈ ಆಸ್ಪತ್ರೆನೋ ಅಥವಾ ಮತ್ತೆಲ್ಲಿಗೋ ಹೋಗುವಾಗ ತನ್ನ ಮನೆಯನ್ನು ಅಥವಾ ತನ್ನ ಪ್ರೀತ್ಯಾಪ್ತರನ್ನೋ ಕೊನೆಯ ಬಾರಿಗೆ ನೋಡುತ್ತಾನೆ. ಮತ್ತು ಹಾಗೆ ನೋಡಿದ ಮನೆಯೋ ಅಥವಾ ಮನೆಯವರೋ ಖಲಾಸ್ ಆಗುವುದೂ ಉಂಟು. ಬಹುಶಃ ಜನಾರ್ದನ ರೆಡ್ಡಿಯ ವಿಷಯದಲ್ಲೂ ಹಾಗೇ ಆಗಿರಬೇಕು.

ಸೆ. 5ರಂದು ಸಿಬಿಐ ಲಕ್ಷಿನಾರಾಯಣ ನಿದ್ದೆಯಲ್ಲಿದ್ದ ರೆಡ್ಡಿಯನ್ನು ಎಬ್ಬಿಸಿಕೊಂಡು ಹೋದಾಗ ರೆಡ್ಡಿ ಆ ಮನೆಯನ್ನು ಆಪ್ಯಾಯಮಾಣವಾಗಿ ಒಮ್ಮೆ ಕಣ್ತುಂಬ ನೋಡಿ ಮಮ್ಮಲಮರುಗಿರಬೇಕು. ಅದಕ್ಕೇಯಾ ರೆಡ್ಡಿ ವಾಪಸು ಹೋಗುವುದಕ್ಕೂ ಮುನ್ನ ಆ ಮನೆಯೇ ಖಲಾಸ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As per the Vastu jailed Janardhan Reddy Bellary Kuteera demolished totally.
Please Wait while comments are loading...