ರಾಜ್ಯಾಧ್ಯಕ್ಷ ಪಟ್ಟವಿಲ್ಲದೆ ರಾಜೀನಾಮೆ ಇಲ್ಲ : ಸದಾ ಪಟ್ಟು

ಹಠಾತ್ತಾಗಿ ನವದೆಹಲಿಗೆ ಅರುಣ್ ಜೇಟ್ಲಿ ತೆರಳಿದ ನಂತರ ಬಿಜೆಪಿಯ ಎಲ್ಲ ರಂಪಾಟಗಳನ್ನು ನಿಭಾಯಿಸುತ್ತಿರುವ ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು, ಸದಾನಂದ ಗೌಡರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ, ಕ್ಯಾಪಿಟಲ್ ಹೋಟೆಲ್‌ನಲ್ಲಿ ಸಂಜೆ ಬಿಜೆಪಿ ಶಾಸಕಾಂಗ ಸಭೆ ಆರಂಭವಾಗಿದ್ದು, ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಸದಾನಂದ ಗೌಡ, ಕೆಎಸ್ ಈಶ್ವರಪ್ಪ, ಅನಂತ್ ಕುಮಾರ್ ಮುಂತಾದವರು ರಾಜನಾಥ್ ಸಿಂಗ್ ಜೊತೆಗೆ ಅಶೋಕ ಹೋಟೆಲ್‌ನಿಂದ ತೆರಳಿದರು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಾಗಿತ್ತು. ಆದರೆ, ಡಿವಿಎಸ್ ಬಣ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರಿಂದ ಸಭೆ ನಡೆಯುವುದೇ ಅನುಮಾನವಾಗಿತ್ತು.
ಈ ಸಭೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಇದರ ಹೊರತಾಗಿ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ ಹುದ್ದೆಯ ಸೃಷ್ಟಿ, ಸಂಪುಟ ಹಂಚಿಕೆ ಕುರಿತಂತೆ ಯಾವ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಬುಧವಾರ ಬೆಳಿಗ್ಗೆ 11.15ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಗದೀಶ್ ಶೆಟ್ಟರ್ 27ನೇ ಮುಖ್ಯಮಂತ್ರಿಯಾಗಿ ಪ್ರಮಾವಚನ ಸ್ವೀಕರಿಸುವುದು ಸುಸ್ಪಷ್ಟವಾಗಿದೆ.












Click it and Unblock the Notifications