ದಲಿತ ಮುಖ್ಯಮಂತ್ರಿಯಾಗಲಿ: ನಂಜಾವದೂತ ಸ್ವಾಮೀಜಿ

ರಾಜ್ಯ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಬಿಜೆಪಿ ಹೈರಾಣವಾಗುತ್ತಿರುವ ಹೊತ್ತಿನಲ್ಲೇ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಮಠದ ಸ್ವಾಮೀಜಿ ನಂಜಾವದೂತ ಸ್ವಾಮೀಜಿ ಒಕ್ಕಲಿಗರಿಗೆ ಹೊಸ ಚೈತನ್ಯ ನೀಡಿದ್ದಾರೆ.
ನಾನು ಜಾತಿ ರಾಜಕೀಯ ಮಾಡಲು ಬರುವುದಿಲ್ಲ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಜನಾಂಗದ ಅಭಿಲಾಷೆ. ಹಾಗಾದಿದ್ದಲ್ಲಿ ದಲಿತ ಸಮುದಾಯದವರನ್ನು ಸಿಎಂ ಮಾಡಿ. ಇಲ್ಲವಾದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ನಂಜಾವದೂತ ಸ್ವಾಮೀಜಿ ಹೇಳಿದ್ದಾರೆ.
ಸದಾನಂದರನ್ನು ಸಿಎಂ ಪಟ್ಟದಿಂದ ಕೆಳಗಿಳಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಕ್ಕಲಿಗ ನಾಯಕರಿಗೆ ಅನ್ಯಾಯವಾಗುತ್ತಿದೆ ಎಂದು ಅದರ ವಿರುದ್ಧ ಪ್ರತಿಭಟಿಸಲು ಒಕ್ಕಲಿಗರ ಸ್ವಾಭಿಮಾನಿ ಒಕ್ಕೂಟ ಮಂಡ್ಯದಲ್ಲಿ ನಾಳೆ ಬಂದ್ ಗೆ ಕರೆ ನೀಡಿದೆ.
ಈ ಮಧ್ಯೆ, ಕರುಣಾಕರ ರೆಡ್ಡಿ ಅವರು ಯಡಿಯೂರಪ್ಪ ಬಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ KMF ಸೋಮಶೇಖರ ರೆಡ್ಡಿ ಅವರು ಮಾತನಾಡಿದ್ದು ಶ್ರೀರಾಮುಲು ಅವರು ಯಾವ ಬಣಕ್ಕೆ ಬೆಂಬಲ ಸೂಚಿಸುತ್ತಾರೋ, ಆ ಬಣದ ನಾಯಕರಿಗೇ ನಮ್ಮ ಮತ. ಅದಕ್ಕೂ ಮುನ್ನ ನಮ್ಮ ನಾಯಕರಾದ ಶ್ರೀರಾಮುಲು ಅವರು ಸೂಚಿಸುವಂತೆ ನಡೆದುಕೊಳ್ಳುತ್ತೇವೆ. ಬಿಜೆಪಿ ಶಾಸಕನಾಗಿದ್ದರೂ ರಾಮುಲು ಅವರು ಕೈಗೊಳ್ಳುವ ನಿರ್ಧಾರವೇ ನಮ್ಮದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications