ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಯಡಿಯೂರಪ್ಪ ಟವಲ್

now-yeddyurappa-wants-bjp-state-presidentship
ಬೆಂಗಳೂರು, ಜುಲೈ 9: ಯಡಿಯೂರಪ್ಪ ಹಾಕಿದ ತಾಳಕ್ಕೆ ತಕ್ಕಂತೆ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿ 10 ತಿಂಗಳಿಂದ ಎದ್ದಿದ್ದ ಬಿರುಗಾಳಿ ಸದ್ಯಕ್ಕೆ ಶಾಂತವಾಗಿರಬಹುದು. ಆದರೆ ಅತಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸುಂಟರಗಾಳಿ ಏಳುವ ಎಲ್ಲ ಲಕ್ಷಣಗಳೂ ಇವೆ. ಮತ್ತು ಇದಕ್ಕೆ ಗಾಳಿ ಹಾಕಲಿರುವವರು none other than ಬಿ ಎಸ್ ಯಡಿಯೂರಪ್ಪ.

ಸದ್ಯೋಭವಿಷ್ಯತ್ತಿನಲ್ಲಿ ಸಂಪುಟ ರಚನೆ ಮತ್ತು ಸದಾನಂದಗೆ ಯಾವ ಸ್ಥಾನ ಕಲ್ಪಿಸಬೇಕು ಎಂಬ ವಿಚಾರಗಳ ಕುರಿತು ಒಂದು ಸುತ್ತಿನ ಅಡ್ಡಗಾಳಿ ಜೋರಾಗಿಯೇ ಬೀಸಬಹುದಾದರೂ ಅದು ಹೆಚ್ಚು ಕಾಲ ಸುಳಿಯುವುದಿಲ್ಲ. ಆದರೆ, ಸಂತ್ರಸ್ತ ಸದಾನಂದಗೆ ಸೂಕ್ತ ಉಪಚಾರ ಮಾಡಲು ಹೋಗಿ ಬಿಜೆಪಿ ಹೈಕಮಾಂಡ್ ಯಡವಟ್ಟು ಮಾಡಿಕೊಂಡರೆ ಕಥೆ ಮುಗಿಯಿತು.

ಅಕಸ್ಮಾತ್ ಸದಾನಂದರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಮತ್ತೆ ಕುಳ್ಳರಿಸುವ ದುಸ್ಸಾಹಸಕ್ಕೆ ಹೈಕಮಾಂಡ್ ಕೈಹಾಕಿದರೆ ಯಡಿಯೂರಪ್ಪ ಪಟಾಲಂ ಸುಮ್ಮನಿರುವುದಿಲ್ಲ ಎಂಬುದು ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಸ್ಪಷ್ಟವಾಗಿದೆ.

'ಈ ಹಿಂದೆ ಇದೇ ಸದಾನಂದ ಗೌಡ ಇದ್ದಾಗಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು. ಈಗ ಮತ್ತೆ ಅವಯ್ಯನನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕುಳ್ಳರಿಸಿ, ಅಕಸ್ಮಾತ್ ಪಕ್ಷ ಅಧಿಕಾರಕ್ಕೆ ಬಂದರೆ ಡೌಟೇ ಬೇಡ. ಸದಾನಂದ ಹಿಂದೆಂದಿಗಿಂತಲೂ ಸರ್ವಶಕ್ತನಾಗುತ್ತಾನೆ' ಎಂಬುದು ಯಡಿಯೂರಪ್ಪಗೆ ಯಾರೂ ಹೇಳಿಕೊಡಬೇಕಿಲ್ಲ. ಅದರ ಬದಲಿಗೆ, ತಾನೇ ಆ ಸ್ಥಾನದಲ್ಲಿ ವಿರಾಜಮಾನವಾದರೆ ಹೇಗೆ? ಎಂಬ ಆಲೋಚನೆಯಲ್ಲಿದ್ದಾರೆ ಸನ್ಮಾನ್ಯ ಯಡಿಯೂರಪ್ಪ.

ಹೇಗೂ ಹಾಲಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಕಾಲಾವಧಿ ಮುಂದಿನ ಜನವರಿಗೆ ಮುಗಿಯಲಿದೆ. ಹಾಗಾಗಿ, ಸದ್ಯಕ್ಕೆ ಆ ಸ್ಥಾನವನ್ನು ಬದಲಾಯಿಸುವ ತಲೆನೋವು ಬೇಡವೆಂದು ವರಿಷ್ಠರು ಸುಮ್ಮನಾಗಬಹುದು. ಆದರೆ ಯಡಿಯೂರಪ್ಪ ಬಿಡಬೇಕಲ್ಲ.

ಆ ಹುದ್ದೆಯ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಯಡಿಯೂರಪ್ಪ ಮುಂದಿನ ಚುನಾವಣೆಗೂ (ಮೇ ತಿಂಗಳು) ಮುನ್ನವೇ ಆ ಸ್ಥಾನದಲ್ಲಿ ತಾವು ಪ್ರತಿಷ್ಠಾಪಿಸಿಬಿಟ್ಟರೆ ಮತ್ತು ಮತದಾರನನ್ನು ಯಾಮಾರಿಸಿ ಪಕ್ಷ ಗೆದ್ದೂ ಬಿಟ್ಟರೆ... ತಮ್ಮನ್ನು ಹಿರಿಯುವವರು ಯಾರೂ ಇರುವುದಿಲ್ಲ ಎಂಬುದು ಯಡಿಯೂರಪ್ಪ ಲೆಕ್ಕಾಚಾರ.

ಈಶ್ವರಪ್ಪ ಅವಧಿ ಮುಗಿಯುವ ವೇಳೆಗೆ ವಿಧಾನ ಸಭೆ ಚುನಾವಣೆ ಎದುರಾಗಲಿದೆ. ಅಷ್ಟರೊಳಗೆ ಸಿಬಿಐ ಸೇರಿದಂತೆ ಎಲ್ಲ ಕಾನೂನು ಕೇಸುಗಳಿಂದ ಹೊರಬಂದು ರಾಜ್ಯಾಧ್ಯಕ್ಷರಾಗಿ ತಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕು ಎಂಬುದು ಯಡಿಯೂರಪ್ಪ ಎಣಿಕೆ. ಹೀಗಾಗಿ ಸದ್ಯಕ್ಕೆ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ತರುವುದು ಬೇಡ ಎಂದು ರಾಷ್ಟ್ರೀಯ ನಾಯಕರಿಗೆ ಆಗಲೇ ಹೇಳಿದ್ದಾರೆ ಎನ್ನಲಾಗಿದೆ.

ಜನನಾಯಕ ಯಡಿಯೂರಪ್ಪ ಹೈಕೋರ್ಟಿಗೆ ಮೊರೆ: ಈ ಪ್ರಯತ್ನವಾಗಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಹಿಂದೆ ಹೈಕೋರ್ಟು ಜಾಮೀನು ದಯಪಾಲಿಸುವಾಗ ಬೆಂಗಲೂರು ಬಿಟ್ಟು ಎಲ್ಲಿಗೂ ಹೋಗಬೇಡಿ ಎಂದು ಷರತ್ತು ವಿಧಿಸಿತ್ತು.

ಇದೀಗ ವರಸೆ ಬದಲಿಸಿರುವ ಯಡಿಯೂರಪ್ಪನವರು ಬೆಂಗಳೂರಿನಿಂದ ಹೊರಹೋಗುವ ಎಲ್ಲ ರಸ್ತೆಗಳೂ ತಮಗೆ ಬಂದ್ ಆಗಿವೆ. ಆದರೆ ತಾನೊಬ್ಬ ಜನನಾಯಕ. ರಾಜ್ಯದಲ್ಲಿ ಬೇಸಿಗೆ ಬಂದ ಬರ ಮುಂಗಾರೂ ಇಲ್ಲದಿರುವುದರಿಂದ ಇನ್ನೂ ತೀವ್ರವಾಗಿ ಕಾಡತೊಡಗಿದೆ.

ಇಂತಹ ದುರ್ಭರ ಪರಿಸ್ಥಿತಿಯಲ್ಲಿ ತಾನು ಜನರ ಬಳಿ ಹೋಗಬೇಕಾದ ಜರೂರತ್ತು ಬಹಳಷ್ಟಿದೆ. ಆದರೆ ಈ ಷರತ್ತು ಅಡ್ಡವಾಗುತ್ತಿದೆ. ಆದ್ದರಿಂದ ಅದನ್ನು ನನ್ನ ರಸ್ತೆಯಿಂದ ಕಿತ್ತುಹಾಕಿ ಎಂದು ಹೈಕೋರ್ಟಿಗೆ ಮೊರೆ ಹೋಗಿದ್ದಾರೆ. ಅಲ್ಲಿಗೆ ಹೈಕೋರ್ಟಿನಿಂದ ಷರತ್ತು ಸಡಿಲಿಸಿಕೊಂಡು, ಪ್ಯಾಂಟ್ ಬಿಗಿಪಡಿಸಿಕೊಂಡು ರಾಜ್ಯ ಪ್ರವಾಸಕ್ಕೆ ಹೊರಡುವ ಲೆಕ್ಕಾಚಾರ ಯಡಿಯೂರಪ್ಪನವರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+