ಬಿಎಸ್ ವೈ, ಡಿಕೆಶಿಗೆ ಲೋಕಾಯುಕ್ತ ಕೋರ್ಟ್ ಸಮನ್ಸ್

ಲೋಕಾಯುಕ್ತ ಕೋರ್ಟಿಗೆ ಆಗಸ್ಟ್ 2ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ. ಈ ಪ್ರಕರಣದ ಇತರ ಆರೋಪಿಗಳಿಗೆ ಕೂಡ ಸಮನ್ಸ್ ಜಾರಿಗೊಳಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ಮಧ್ಯಾಹ್ನ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ನಾಲ್ಕು ದಿನಗಳ ಮಟ್ಟಿಗೆ ಮಾತ್ರ ತಾತ್ಕಾಲಿಕವಾಗಿ ಜಾಮೀನು ಪಡೆದಿದ್ದ ಶಿವಕುಮಾರ್ ಅವರು ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ನಗರದ ಬೆನ್ನಿಗಾನಹಳ್ಳಿ ಜಮೀನು ಡಿ ನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸೇರಿದಂತೆ ಆರು ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಜೂ.22 ರಂದು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ಹೋಬಳಿಯ ಬೆನ್ನಿಗಾನಹಳ್ಳಿಯಲ್ಲಿನ ಸರ್ವೆ ನಂ.50/2ರಲ್ಲಿನ 4 ಎಕರೆ 20 ಗುಂಟೆ ಜಮೀನನ್ನು ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಖರೀದಿಸಿ, ನಂತರ ತಮ್ಮ ಅಧಿಕಾರ ದುರುಪಯೋಗ ಪಡಿಸಿ ಕೊಂಡು ಎಲ್ಲ ದಾಖಲಾತಿಗಳನ್ನು ಕಂದಾಯ ಇಲಾಖೆಯ ಅಧಿಕಾರಿ ಗಳಿಂದ ತಮ್ಮ ಹೆಸರಿಗೆ ವರ್ಗಾಯಿಸಿ ಕೊಂಡಿರುವ ಬಗ್ಗೆ ಸಾಮಾಜಿಕ ಕಾರ್ಯ ಕರ್ತ ಟಿ.ಜೆ.ಅಬ್ರಾಹಂ ಹಾಗೂ ಕೃಷಿಕ ಕಬ್ಬಾಳೇಗೌಡ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಡಿ.ಕೆ.ಶಿವಕುಮಾರ್, ಐಎಎಸ್ ಅಧಿಕಾರಿ ಡಾ.ರಾಮೇಗೌಡ, ಜಿಲ್ಲಾ ನೋಂದಣಾಧಿಕಾರಿ ಹಮೀದ್ ಅಲಿ, ನಿವೃತ್ತ ತಹಶೀಲ್ದಾರ್ ಹನುಮಂತ್, ನಿವೃತ್ತ ರಾಜಸ್ವ ನಿರೀಕ್ಷಕ ಚಂದ್ರ ಶೇಖರಯ್ಯ, ಗ್ರಾಮ ಲೆಕ್ಕಿಗ ದೊಡ್ಡ ಹನುಮಯ್ಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ.
ಲೋಕಾಯುಕ್ತ ಎಸ್ ಪಿ ಪಿಕೆ ಶಿವಶಂಕರ್, ಡಿವೈಎಸ್ ಪಿ ಪಾಲಾಕ್ಷಯ್ಯ ಅವರಿದ್ದ ತಂಡ ಸುಮಾರು 35 ಪ್ರಶ್ನೆಗಳನ್ನು ಡಿಕೆ ಶಿವಕುಮಾರ್ ಅವರತ್ತ ಎಸೆದು ಉತ್ತರ ಪಡೆಯಲು ಆಗದೆ ಶ್ರಮಪಟ್ಟಿದ್ದರು.
ಡಿಕೆ ಶಿವಕುಮಾರ್ ಅವರ ಅಸಮರ್ಪಕ ಉತ್ತರದಿಂದ ಬೇಸತ್ತ ಲೋಕಾಯುಕ್ತ ಅಧಿಕಾರಿಗಳು, ಬೇರೆ ವಿಧಿವಿಲ್ಲದೆ ಡಿಕೆ ಶಿವಕುಮಾರ್ ಅವರಿಗೆ ದಾಖಲೆ ಸಮೇತ ವಿವರಿಸಲು ಕಾಲಾವಕಾಶ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ 5.11 ಎಕರೆ ಜಮೀನನ್ನು ಅಕ್ರಮವಾಗಿ ಡಿ ನೋಟಿಫೈ ಮಾಡಿಸಿಕೊಂಡಿದ್ದ ಆರೋಪವನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ.
ಟಿಜೆ ಅಬ್ರಹಾಂ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿದ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications
