ಯಡಿಯೂರಪ್ಪ ವಿರುದ್ಧ ಬಚ್ಚೇಗೌಡ ರೌದ್ರಾವತಾರ

ಮಾಜಿ ಮುಖ್ಯಮಂತ್ರಿಯೊಬ್ಬರ (ಯಡಿಯೂರಪ್ಪ) ಚಿತಾವಣೆಯ ಮೇರೆಗೆ ಅನಗತ್ಯವಾಗಿ ಕೆಲವು ಸಹೋದ್ಯೋಗಿಗಳು ನಿನ್ನೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಆಟಾಟೋಪಕ್ಕೆ ಇತಿಶ್ರೀ ಹಾಡಬೇಕಾಗಿದೆ. ನಾಲ್ಕು ವರ್ಷಗಳ ಬಿಕ್ಕಟ್ಟಿಗೆ ಮಂಗಳಹಾಡುವ ನಿರ್ಣಾಯಕ ಹಂತಕ್ಕೆ ಬಿಜೆಪಿ ಪಕ್ಷ ಬಂದು ನಿಂತಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಬಿಎನ್ ಬಚ್ಚೇಗೌಡ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಮಧ್ಯೆ ಬಿಜೆಪಿ ಬಿಕ್ಕಟ್ಟಿಗೆ, ಮುಖ್ಯಮಂತ್ರಿ ಸದಾನಂದ ಗೌಡರ ಬದಲಾವಣೆ ಪಟ್ಟು ಹಿಡಿದಿರುವ ಆ ಮಾಜಿ ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆಗೆ ಕುಮ್ಮಕ್ಕು ನೀಡಿದ್ದಾರೆ. ಅವರೆಲ್ಲ ಅಮಾಯಕರು. ಆದರೆ ಆ ಮಾಜಿ ಮುಖ್ಯಮಂತ್ರಿಯೇ ಚಿತಾವಣೆ ನಡೆಸಿದ್ದಾರೆ ಎಂದು ಯಡಿಯೂರಪ್ಪ ಅವರ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ಧ ಕಿಡಿಕಾರಿದರು.
ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಬಚ್ಚೇಗೌಡರು ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿರುವುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದರು. ನಾವು ಯಾರೆಲ್ಲ ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರ ಜತೆ ಗುರುತಿಸಿಕೊಂಡಿದ್ದೇವೆ. ಅವರೆಲ್ಲ ಇಂದು 12 ಗಂಟೆಗೆ ಸದಾನಂದ ಗೌಡರನ್ನು ಭೇಟಿಯಾಗಲಿದ್ದೇವೆ.
ಅಲ್ಲಿ ಆ ಮಾಜಿ ಮುಖ್ಯಮಂತ್ರಿಯ ಚಿತಾವಣೆಗೆ ಸರಿಯಾಗಿ ಪಾಠ ಕಲಿಸಬೇಕು ಮತ್ತು ಅದಕ್ಕೆ ಇಂದೇ ಕೊನೆ ಹಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಸಚಿವ ಬಿಎನ್ ಬಚ್ಚೇಗೌಡ ಅವರು ಯಡಿಯೂರಪ್ಪನವರತ್ತ ಕೆಂಡಕಾರುತ್ತಲೇ ಮಾತನಾಡಿದರು.
ಈ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ 9 ಸಚಿವರ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿ ಸದಾನಂದ ಗೌಡರು ಅಂಗೀರಿಸುವುದಿಲ್ಲ. ಇದು ವರಿಷ್ಠರ ತೀರ್ಮಾನವೂ ಆಗಿದೆ ಎಂದು ಹೇಳಿದರು.
'ಸದಾನಂದ ಗೌಡರು ರಾಜ್ಯಪಾಲ ಎಚ್ ಆರ್ ಭಾರಧ್ವಾಜ್ ಅವರನ್ನು ಭೇಟಿ ಮಾಡುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಅದೊಂದು ಪೂರ್ವನಿಗದಿತ ಭೇಟಿ ಇರಬಹುದು. ಆದರೆ ಖಂಡಿತ ಹಾಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಅವರು ತೆರಳಿಲ್ಲ' ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಆದರೆ ಹಾಗೆ ಈಶ್ವರಪ್ಪನವರು ಸುದ್ದಿಗಾರರಿಗೆ ಮಾಹಿತಿ ನೀಡುವ ಕೆಲವೇ ಕ್ಷಣಗಳ ಮುನ್ನ ಸದಾನಂದ ಗೌಡರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದರು.












Click it and Unblock the Notifications