ಪಿಜಿ ಹಾಸ್ಟೆಲಿನಲ್ಲಿ Mphasis ಮಹಿಳಾ ಟೆಕ್ಕಿ ಸಾವು

24 ವರ್ಷದ ನಾಗರಾಣಿ ಮೂಲತಃ ಆಂಧ್ರದ ಮುಶೀರಾಬಾದಿನ ಪದ್ಮರಾವ್ ನಗರದವರು. ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದ, ನಾಗರಾಣಿ ಅವರು ಇಲ್ಲಿನ Mphasis ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.
ಕಳೆದ ಭಾನುವಾರ ನಾಗರಾಣಿ ಸಾವಿಗೀಡಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ ಟೆಕ್ಕಿ ನಾಗರಾಣಿ ಅವರು ಸಾವಿಗೀಡಾಗುವ ದಿನ ತಮ್ಮ ಸ್ನೇಹಿತೆಯರ ಜತೆ ಸಂತೋಷದಿಂದಲೇ ಕಾಲ ಕಳೆದಿದ್ದಾರೆ. ಎಂದಿನಂತೆ ಬೆಳಗ್ಗೆ ತಿಂಡಿ ತಿಂದ ನಾಗರಾಣಿ ಅವರು 11 ಗಂಟೆಯ ವೇಳೆಗೆ ತಮ್ಮ ರೂಮಿಗೆ ವಾಪಸಾಗಿದ್ದಾರೆ.
ರಜಾ ದಿನವಾಗಿದ್ದರಿಂದ ಸ್ವಲ್ಪ ಬಟ್ಟೆ ಒಗೆಯುವುದಿದೆ. ಅದನ್ನೆಲ್ಲ ಮುಗಿಸಿಕೊಂಡು ಊಟದ ವೇಳೆಗೆ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ನಗುನಗುತ್ತಲೇ ನಾಗರಾಣಿ ತನ್ನ ರೂಮಿಗೆ ತೆರಳಿದ್ದಳು. ಆದರೆ ನಾಗರಾಣಿ ಮಧ್ಯಾಹ್ನ ಕಳೆದು ಎಷ್ಟು ಹೊತ್ತಾದರೂ ಊಟಕ್ಕೆ ಬರಲಿಲ್ಲ. ಸುಮಾರು 2 ಗಂಟೆಯ ವೇಳೆಗೆ ಆಕೆಯ ಗೆಳತಿಯೊಬ್ಬರಿಗೆ ಅನುಮಾನ ಹೆಚ್ಚಾಗಿ ತಕ್ಷಣ ಹಾಸ್ಟೆಲ್ ಮುಖ್ಯಸ್ಥರ ಮುಂದೆ ತಮ್ಮ ದುಗುಡ ತೋಡಿಕೊಂಡಿದ್ದಾರೆ.
ತಕ್ಷಣ ಹಾಸ್ಟೆಲ್ ಮುಖ್ಯಸ್ಥರು ಬಂದು ರೂಮಿನ ಬಾಗಿಲು ಒಡೆದು ಹಾಕಿ ಒಳಬಂದಿದ್ದಾರೆ. ಆದರೆ ಅಲ್ಲಿ ನಾಗರಾಣಿ ನೀರಿನ ಬಕೆಟ್ ಪಕ್ಕದಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಇದನ್ನು ಕಂಡು ಹೌಹಾರಿದ ಹಾಸ್ಟೆಲ್ ಮಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ನಾಗರಾಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ನಾಗರಾಣಿ ಅದಾಗಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ನಾಗರಾಣಿ ಸಾವಿನ ಸುತ್ತ ಅನುಮಾನದ ಹುತ್ತಗಳು ಎದ್ದಿದ್ದು, ಆಕೆಯ ಸಾವಿಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಜೆಬಿ ನಗರ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಧಿವಿಜ್ಞಾನ ಪರಿಣತರ ಮೊರೆಹೋಗಿದ್ದಾರೆ. ಶವಪರೀಕ್ಷೆ ನಂತರ ಮೃತ ದೇಹವನ್ನು ಆಕೆಯ ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ. ನಾಗರಾಣಿ ತಂದೆ ಟಿ ನಾಗರಾಜು ಅವರು ಹೈದರಾಬಾದಿನ ಆಂಜನೇಯನ ದೇವಸ್ಥಾನದ ಸಮೀಪ ವ್ಯಾಪಾರಸ್ಥರಾಗಿದ್ದಾರೆ. ನಾಗರಾಣಿ ಮಲ್ಲಾರೆಡ್ಡಿ ಕಾಲೇಜಿನಲ್ಲಿ ತಮ್ಮ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದಾರೆ.












Click it and Unblock the Notifications