ಸೈನಾಗೆ ಮೂರನೇ ಇಂಡೋನೇಶಿಯಾ ಟ್ರೋಫಿ

2009 ಮತ್ತು 2010ರಲ್ಲಿ ಕೂಡ ಸೈನಾ ಈ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಒಂದು ಗಂಟೆ ನಾಲ್ಕು ನಿಮಿಷ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಲೀಯನ್ನು ಸೈನಾ ಅವರು 13-21 22-20 21-19 ಅಂತರದಿಂದ ಗೆದ್ದರು. ಈಗ ಅವರ ಗುರಿ ಮುಂದಿನ ತಿಂಗಳು ಆರಂಭವಾಗಲಿರುವ ಓಲಂಪಿಕ್ಸ್ ಮೇಲೆ ನೆಟ್ಟಿದೆ.
"ಫೈನಲ್ ತುಂಬ ತುರುಸಿನಿಂದ ಕೂಡಿತ್ತು. ಆದರೆ, ಇಲ್ಲಿನ ಪ್ರೇಕ್ಷಕರು ನನ್ನನ್ನು ಹುರಿದುಂಬಿಸುತ್ತಿದುದನ್ನು ನೋಡಿ ಪ್ರತಿ ಬಾರಿ ಕಣಕ್ಕಿಳಿದಾಗಲೂ ನಾನೇ ಚಾಂಪಿಯನ್ ಎಂಬಂತೆ ಭಾಸವಾಗುತ್ತಿತ್ತು" ಎಂದು 22 ವರ್ಷದ ಸುಂದರಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಗೆಲುವು ಸೈನಾಗೆ ಹೆಚ್ಚಿನ ಖುಷಿ ತರಲು ಕಾರಣವೇನೆಂದರೆ, ಲೀ ವಿರುದ್ಧ ಹಿಂದೆ ನಾಲ್ಕು ಬಾರಿ ಸೋತು, ಒಂದು ಬಾರಿ ಮಾತ್ರ ಗೆಲುವು ಸಾಧಿಸಿದ್ದರು.
ಪಂದ್ಯದುದ್ದಕ್ಕೂ ಇಬ್ಬರ ನಡುವೆ ಭಾರೀ ಪೈಪೋಟಿ ನಡೆಯಿತು. ಬೈಸ್ ಲೈನ್ ನಲ್ಲಿ ಇಬ್ಬರೂ ಸಮಬಲ ತೋರುತ್ತಿದ್ದರೆ, ನೆಟ್ ಬಳಿ ಲೀ ಒಂದು ಕೈ ಮೇಲಿದ್ದರು. ಹೀಗಾಗಿ ಐದನೇ ಶ್ರೇಯಾಂಕದ ಸೈನಾಳನ್ನು ಬೇಸ್ ಲೈನಿಗೇ ಕಟ್ಟಿಹಾಕಿದ ನಾಲ್ಕನೇ ಶ್ರೇಯಾಂಕದ ಲೀ ಅದ್ಭುತ ಆರಂಭ ಪಡೆದು ಮೊದಲ ಗೇಮ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್ ನಲ್ಲಿ ಸೈನಾ ಆರಂಭದಲ್ಲಿ ಚೇತರಿಸಿಕೊಂಡು ಉತ್ತಮ ಮುನ್ನಡೆ ಪಡೆದರೂ ಕೊನೆಯ ಹಂತದಲ್ಲಿ ಅನೇಕ ತಪ್ಪುಗಳನ್ನೆಸಗಿ ಚಾಂಪಿಯನ್ ಟ್ರೋಫಿಯನ್ನೇ ಲೀಗೆ ಬಿಟ್ಟುಕೊಡುವ ಹಂತಕ್ಕೆ ಬಂದಿದ್ದರು. 18-20ಯಿಂದ ಹಿಂದಿದ್ದಾಗ ಚಾಂಪಿಯನ್‌ಶಿಪ್ ಪಾಯಿಂಟ್‌ಗೆ ಬಚಾವಾದ ಸೈನಾ ಮತ್ತೆ ಪುಟಿದೆದ್ದು ಗೇಮ್ ಅನ್ನು 22-20ರಿಂದ ಗೆದ್ದುಕೊಂಡರು.
ಮೂರನೇ ಗೇಮ್‌ನಲ್ಲಿ ಕೂಡ ಇಬ್ಬರ ನಡುವೆ ಸಮಬಲದ ಹೋರಾಟ ಕಂಡುಬಂದಿತು. ಆರಂಭದಲ್ಲಿ 5-2ರಿಂದ ಸೈನಾ ಮುನ್ನುಗ್ಗಿದರೂ, ಮಧ್ಯದಲ್ಲಿ 10-11ರಿಂದ ಹಿಂದುಳಿದರು. ಕೊನೆಗೆ ಇಬ್ಬರ ನಡುವೆ ಅತ್ಯುತ್ಕೃಷ್ಟ ಹೋರಾಟ ಕಂಡುಬಂದರೂ, ಮನಸಿನ ಯುದ್ಧವನ್ನು ಗೆಲ್ಲುವಲ್ಲಿ ಸೈನಾ ಸಫಲರಾಗಿ ಮೂರನೇ ಬಾರಿಗೆ ಇಂಡೋನೇಶಿಯಾ ಓಪನ್ ಟ್ರೋಫಿಯನ್ನು ಗೆದ್ದರು.
"ಈ ಗೆಲುವಿನಿಂದ ಓಲಂಪಿಕ್‌ನಲ್ಲಿಯೂ ಸೈನಾ ಚಿನ್ನದ ಪದಕ ಗೆಲ್ಲಬೇಕೆಂಬ ಉತ್ಸಾಹ ಇಮ್ಮಡಿಸಿದೆ. ಆಕೆಯಲ್ಲಿ ವಿಶ್ವಾಸ ಮತ್ತು ಧೈರ್ಯ ಇನ್ನೂ ಹೆಚ್ಚಿದೆ. ಓಲಂಪಿಕ್ಸ್‌ನಲ್ಲಿ ಉತ್ತಮ ಆಟ ಆಡುತ್ತಾಳೆಂಬ ಭರವಸೆ ನನಗಿದೆ. ಸೈನಾ ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ" ಎಂದು ಸೈನಾ ನೆಹ್ವಾಲ್ ಅವರ ತಂದೆ ಹರವಿಂದರ್ ಸಿಂಗ್ ಹೈದರಾಬಾದಿನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications