ರೆಡ್ಡಿ ಅಕ್ರಮ ಗಣಿ ಫಲ: ಕಾರ್ ಚಾಲಕ ಆತ್ಮಹತ್ಯೆ

ಇದು ಜನಾರ್ದನ ರೆಡ್ಡಿಯ ಅಕ್ರಮ ಗಣಿಗಾರಿಕೆಯ ಫಲ ಎನ್ನಬಹುದು. ಸಾಕ್ಷಾತ್ ಲಕ್ಷ್ಮಿ ಪುತ್ರ ಗಣಿ ಧಣಿ ರೆಡ್ಡಿಯ ಮನೆಯಲ್ಲಿ ಕಾರಿನ ಚಾಲಕನಾಗಿರುವುದೆಂದರೆ ಮಾಮೂಲಿ ವಿಷಯವಾ!? ಇಲ್ಲಿ ಸುಮ್ಮನೆ ಹಾಗೇ ಒಂದು ವಿಷಯ ಹೇಳುವುದಾದರೆ ಇನ್ಫೋಸಿಸ್ ಆರಂಭವಾದಾಗ ಆ ಕಂಪನಿಯ ಡ್ರೈವರುಗಳಿಗೆ ಕರೆಕರೆದು ಕಂಪನಿಯ ಷೇರುಗಳನ್ನು ನೀಡಲಾಗುತ್ತಿತ್ತಂತೆ. ಇದರಿಂದ ಮುಂದೆ ಕಂಪನಿ ಉಚ್ಛ್ರಾಯ ಸ್ಥಿತಿಗೆ ಬರುತ್ತಿದ್ದಂತೆ ಆ ಡ್ರೈವರುಗಳೆಲ್ಲ ಸುಖಾಸುಮ್ಮನೆ ಕೋಟ್ಯಧಿಪತಿಗಳಾದರಂತೆ!
ಬಹುಶಃ ಗಣಿ ಧಣಿ ರೆಡ್ಡಿ ಮನೆಯ ಕಾರಿನ ಚಾಲಕನೂ ಅದೇ ಕನಸು ಕಂಡಿರಬೇಕು. ಆದರೆ ವಿಧಿ ಸಿಬಿಐ ರೂಪದಲ್ಲಿ ಬಯಸಿದ್ದೇ ಬೇರೆಯನ್ನು. ಅತ್ತ ತನ್ನ ಮಾಲೀಕ ರೆಡ್ಡಿ ಮತ್ತು ಅವರಿಗೆ ಸೇರಿದ ಐಷಾರಾಮಿ ವಾಹನಗಳು ಒಟ್ಟಿಗೇ ಸಿಬಿಐ ವಶಕ್ಕೆ ಹೋಗುತ್ತಿದ್ದಂತೆ ವಾಹನದ ಚಾಲಕ ಕಂಗೆಟ್ಟಿದ್ದಾನೆ. ಆರ್ಥಿಕವಾಗಿ ಬಸವಳಿದ ಆ ಚಾಲಕ ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಲೋಕದ ಗೊಡವೆಗೆ ಗುಡ್ ಬೈ ಹೇಳಿದ್ದಾನೆ.
ರೆಡ್ಡಿಯ ಅಕ್ರಮ ಗಣಿಗಾರಿಕೆ ಪರೋಕ್ಷವಾಗಿ ವ್ಯಕ್ತಿಯೊಬ್ಬರ ಜೀವನವನ್ನು ಕಸಿದುಕೊಂಡಿರುವ ಮೊದಲ ಪ್ರಕರಣ ಇದಾಗಿದೆ ಎನ್ನಬಹುದು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಡ್ರೈವರ್ ರಾಜಾರಾಂ (52) ಬಳ್ಳಾರಿಯ ಕುವೆಂಪು ನಗರದ ನಿವಾಸಿ. ಈತ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಕಾರಿಗೆ ಚಾಲಕನಾಗಿದ್ದ.
ರಾಜಾರಾಂ ಅನೇಕ ವರ್ಷಗಳಿಂದ ಲಕ್ಷ್ಮೀ ಅರುಣಾ ಅವರ ಕಾರಿಗೆ ಚಾಲಕನಾಗಿದ್ದ. ಆದರೆ ರೆಡ್ಡಿ ಜೈಲುಪಾಲಾದ ಬಳಿಕ 6 ತಿಂಗಳ ಹಿಂದೆ ರಾಜಾರಾಂನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಕೆಲಸ ಕಾರ್ಯವಿಲ್ಲದ ರಾಜಾರಾಂ ಬರೋಬ್ಬರಿ 6 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದ.
ಹಣವಿಲ್ಲದೆ ಕಂಗೆಟ್ಟಿದ್ದ ರಾಜಾರಾಂ, ತನ್ನ ಹೆಸರಿನಲ್ಲಿದ್ದ ನಿವೇಶನವನ್ನು ಮಾರಾಟ ಮಾಡಿ, ಆ ಹಣದಿಂದ ಸಾಲ ತೀರಿಸಲು ಆಲೋಚಿಸಿದ್ದ. ಆದರೆ ನಿವೇಶನ ಮಾರಾಟಕ್ಕೆ ಮನೆಯವರು ಬಿಲ್ಕುಲ್ ಒಪ್ಪಿರಲಿಲ್ಲ. ಅನ್ಯ ಮಾರ್ಗ ಕಾಣದ ರಾಜಾರಾಂ, ಅನಿವಾರ್ಯವಾಗಿ ಇಹಲೋಕಕ್ಕೆ ಗುಡ್ ಬೈ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ರಾಜಾರಾಂ, ಶನಿವಾರ ಮನೆಯಲ್ಲೇ ವಿಷ ಸೇವಿಸಿದ್ದಾನೆ. ವಿಷ ಸೇವಿಸಿದ ರಾಜಾರಾಂನನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈಗ ಕೌಲ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications