ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ 2012: ಜರ್ಮನಿ 'ತಲೆ' ಕಾಯ್ದ ಗೊಮೇಜ್

By Mahesh
|
Google Oneindia Kannada News

ಲಿವಿವ್, ಜೂ.10: ಯುರೋ ಕಪ್ 2012ನ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ಪೋರ್ಚುಗಲ್ ಕಾದಾಟ ಪ್ರೇಕ್ಷಕರಿಗೆ ಮುದ ನೀಡಿತು. ಅದ್ಭುತ ಆಟಗಾರರಿದ್ದರೂ ಪಂದ್ಯದಲ್ಲಿ ಒಂದು ಗೋಲು ಮಾತ್ರ ದಾಖಲಿಸಿದ್ದು ಅಚ್ಚರಿಯ ವಿಷಯವಾಗಿತ್ತು.

ಜರ್ಮನಿ ತಂಡ ಮರಿಯೊ ಗೊಮೇಜ್ ಹೆಡ್ ಮಾಡುವ ಮೂಲಕ ಹೊಡೆದ ಏಕೈಕ ಗೋಲಿನಿಂದ ರೊನಾಲ್ಡೋ ಅವರ ಪೋರ್ಚುಗಲ್ ಪಡೆಯನ್ನು ಸೋಲಿಸಿ ಶುಭಾರಂಭ ಮಾಡಿದೆ.

ಇಂದಿನ ಪಂದ್ಯ: ಸಿ ಗುಂಪಿನ ಮೊದಲ ಪಂದ್ಯ ಪೋಲೆಂಡ್ ನ ಡ್ಯಾ ನ್ ಸ್ಕ್ ನಲ್ಲಿ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಹಾಲಿ ವಿಶ್ವ ಚಾಂಪಿಯನ್ ಸ್ಪೇನ್ ವಿರುದ್ಧ ಇಟಲಿ ಸೆಣಸಲಿದೆ. (ಸಮಯ 9.30 IST, ನಿಯೋ ಪ್ರೈಮ್ ವಾಹಿನಿಯಲ್ಲಿ ನೇರ ಪ್ರಸಾರ).

ಎರಡನೇ ಪಂದ್ಯದಲ್ಲಿ ಪೋಲೆಂಡ್ ನ ಪೋಜ್ನಾನ್ ನಲ್ಲಿ ಕ್ರೋವೇಷಿಯಾ ವಿರುದ್ಧ ಐರ್ಲೆಂಡ್ ಕಾದಾಡಲಿದೆ. (ಸಮಯ ಮಧ್ಯರಾತ್ರಿ 12.15)

ಪಂದ್ಯದ ನಂತರ ಜರ್ಮನಿ ಕೋಚ್ ಜೋಕಿಂ ಲ್ಯೂ 'ಯುರೋ ಕಪ್ ಗೆ ಬಂದಿದ್ದು ಅಭ್ಯಾಸ ಇಲ್ಲದೆ ಎಫ್ 1 ರೇಸ್ ಗೆ ಇಳಿದಂತೆ ಆಗಿದೆ' ಎಂದಿದ್ದಾರೆ. ಆದರೆ, UEFA ಚಾಂಪಿಯನ್ಸ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದ್ದ ಬಯರ್ನ್ ಮ್ಯೂನಿಚ್ ತಂಡದಲ್ಲಿ ಜರ್ಮನಿ ತಂಡದ ಬಹುತೇಕ ಆಟಗಾರರು ಇದ್ದರು ಎಂಬುದನ್ನು ಮರೆಯುವಂತಿಲ್ಲ.

ಪೋರ್ಚುಗಲ್ ವಿರುದ್ಧದ ಪಂದ್ಯದ ಆರಂಭದ 1.25 ನೇ ನಿಮಿಷದಲ್ಲೇ ಹೆಡ್ ಮಾಡಿ ಗೋಲು ಗಳಿಸುವ ಯತ್ನದಲ್ಲಿ ಸ್ವಲ್ಪದರಲ್ಲಿ ವಂಚಿತರಾಗಿದ್ದ ಗೊಮೇಜ್ ಹೆಚ್ಚಿನ ಗೋಲು ಗಳಿಸುವ ನಿರೀಕ್ಷೆ ಹುಟ್ಟಿಸಿದ್ದರು.

ಆದರೆ, ಜರ್ಮನಿ ಗೆಲುವಿಗೆ ಕಾರಣವಾದ ಗೋಲು ಬಂದಿದ್ದು 72ನೇ ನಿಮಿಷದಲ್ಲಿ, ಸಾಮಿ ಖದಿರಾ ಕೊಟ್ಟ ಪಾಸ್ ಅನ್ನು ಉತ್ತಮವಾಗಿ ಹೆಡ್ ಮಾಡುವ ಮೂಲಕ ಗೊಮೆಜ್ ಗೋಲು ಗಳಿಸಿದರು.

ಆದರೂ, ಸ್ವಶ್ಸ್ ಟೈಗರ್, ಮುಲ್ಲರ್, ಪೊಡೊಲ್ ಸ್ಕಿ, ಓಜಿಲ್, ಗೊಮೆಜ್, ಕ್ರೂಸ್, ಕ್ಲೋಸ್, ಖದಿರಾ ರಂಥ ಅದ್ಭುತ ಸ್ಟ್ರೈಕರ್ ಗಳಿದ್ದ ಜರ್ಮನಿ ಪಡೆ ಒಂದು ಗೋಲು ಮಾತ್ರ ಗಳಿಸಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಜರ್ಮನಿ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ನೆದರ್ಲೆಂಡ್ ವಿರುದ್ಧ ಜೂ.14ರಂದು ಆಡಲಿದೆ. ಡೆನ್ಮಾರ್ಕ್ ವಿರುದ್ಧ ಸೋಲುಂಡಿರುವ ಡಚ್ಚರಿಗೆ ಜರ್ಮನಿ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ.

ಪೋರ್ಚುಗಲ್ ವೀರ ರೊನಾಲ್ಡೋ: ರಿಯಲ್ ಮ್ಯಾಡ್ರಿಡ್ ಪರ ಗೋಲುಗಳ ಸುರಿಮಳೆಗೆರೆದಿದ್ದ ಕ್ರಿಶ್ಚಿಯನ್ ರೊನೊಲ್ಡೋ ಆಟ ಒಂದೆರಡು ಬಾರಿ ಮಾತ್ರ ಆಕರ್ಷಕವಾಗಿತ್ತು. ಆದರೆ, ಪಂದ್ಯದ ಎರಡನೇ ಅವಧಿಯಲ್ಲಿ ಗೋಲು ಗಳಿಸಲು ಭಾರಿ ಯತ್ನ ನಡೆಸಿ ವಿಫಲರಾದರು.

ಪೋರ್ಚುಗಲ್ ಪರ ಪೋಸ್ಟಿಂಗ, ನಾನಿ ಮೊದಲಾರ್ಧದಲ್ಲಿ ಚಿನಕುರಳಿ ಆಟ ಪ್ರದರ್ಶಿಸಿದರೆ, ಪೆಪೆ ಹಾಗೂ ರೊನಾಲ್ಡೋ ದ್ವಿತಿಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಜರ್ಮನಿ ನಾಯಕ ಲಾಮ್ ಅವರ ನೇತೃತ್ವದ ರಕ್ಷಣಾ ಪಡೆ ದಾಟಿ ಮುಂದೆ ಸಾಗಲು ಪೋರ್ಚುಗೀಸರು ತಿಣುಕಾಡಿದರು.

ಪೊರ್ಚುಗೀಸ್ ಭವಿಷ್ಯ ಮುಂದಿನ ಪಂದ್ಯದಲ್ಲೇ ತಿಳಿಯಲಿದೆ. ರೊನಾಲ್ಡೋ ಅವರು ಗೋಲು ಗಳಿಸುವ ಚಾಕಚಕ್ಯತೆ ಮೆರೆಯದಿದ್ದರೆ ಪೋರ್ಚುಗೀಸರು ಗ್ರೂಪ್ ಹಂತದಲ್ಲೇ ನಿರ್ಗಮಿಸುವ ಅಪಾಯವಿದೆ. ಪೋರ್ಚುಗೀಸರು ತಮ್ಮ ಮುಂದಿನ ಪಂದ್ಯವನ್ನು ಜೂ.13ರಂದು ಡೆನ್ಮಾರ್ಕ್ ವಿರುದ್ಧ ಆಡಲಿದ್ದಾರೆ.

English summary
Striker Mario Gomez's second-half header Euro 2012 favorites Germany to continue winning strike in Euro. Joachim Loew's Germany beat Portugal 1-0 in opening encounter of Group B
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X