ಜಗನ್ ಆಸ್ತಿ 16,97,335 ಕೋಟಿ ರು ಅಷ್ಟೇ!

ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತಿರುವ ಜಗನ್ ಮೋಹನ್ ರೆಡ್ಡಿ ಅವರ ಆಸ್ತಿ ಮೊತ್ತ 440 ಕೋಟಿ ರು ಅಲ್ಲ 16.97 ಲಕ್ಷ ಕೋಟಿ ರು ಎಂದು ಆಂಧ್ರಪ್ರದೇಶ ತೆಲುಗುದೇಶಂ ಪಕ್ಷದ ನಾಯಕ ದಡಿ ವೀರಭದ್ರರಾವ್ ಆರೋಪಿಸಿದ್ದಾರೆ.
ಜಗನ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಕ್ಯಾಬಿನೆಟ್ ಸಚಿವರು, ಆಗಿದ್ದ ಅಧಿಕಾರಿಗಳು ಎಲ್ಲರನ್ನು ತನಿಖೆಗೆ ಒಳಪಡಿಸಿದರೆ ಇನ್ನಷ್ಟು ಸತ್ಯ ಹೊರಬೀಳಲಿದೆ ಎಂದು ಟಿಡಿಪಿ ಆಗ್ರಹಿಸಿದೆ.
ಜಗನ್ ವಿರುದ್ಧ ಸಿಬಿಐ ದಾಖಲಿಸಿರುವ ಮೂರು ಚಾರ್ಚ್ ಶೀಟುಗಳು ಆತನ ಅಕ್ರಮದ ಸ್ಯಾಂಪಲ್ ಅಷ್ಟೇ. ಅಸಲಿ ಮೊತ್ತ ಕೆದಕಬೇಕಾದರೆ ಸಮಗ್ರ ತನಿಖೆ ಅಗತ್ಯವಿದೆ ಎಂದು ವೀರಭದ್ರರಾವ್ ಹೇಳಿದ್ದಾರೆ.
ಟಿಡಿಪಿ ಪ್ರಕಟಿಸಿರುವ ಜಗನ್ ಮೋಹನ್ ರೆಡ್ಡಿ ಆಸ್ತಿ ವಿವರ ಇಂತಿದೆ:
* ಸುಮಾರು 33,935 ಕೋಟಿ ಮೌಲ್ಯದ 94,038 ಎಕರೆ ಭೂಮಿ ಹೊಂದಿದ್ದಾರೆ.
* 1,81,079 ಎಕರೆ ಗಣಿ ಗುತ್ತಿಗೆ ನೀಡಲಾಗಿದ್ದು, 16,63,400 ಕೋಟಿ ಆದಾಯ
* 822 ಎಕರೆ ಗಣಿ ಕಂಪನಿಗೆ ಜಗನ್ ಅಸಲಿ ಒಡೆಯನಾಗಿದ್ದಾನೆ. ಇದರ ಗಳಿಕೆ 3,600 ಕೋಟಿ ರು.ಇದೆ.
* ರಂಗಾರೆಡ್ಡಿ ಜಿಲ್ಲೆಯಲ್ಲಿರುವ ತಾನ್ಲಾ ಸಲ್ಯೂಷನ್ 250 ಎಕರೆ ಭೂಮಿ ಹೊಂದಿದ್ದು, 500 ಕೋಟಿ ರು ಬೆಲೆ ಬಾಳುತ್ತದೆ.
* ಸ್ಟಾರ್ ಗೇಜ್, ಬ್ರಹ್ಮಣಿ ಎಸ್ ಇಜಡ್ ವಲಯಕ್ಕೆ 750 ಎಕರೆ 1,500 ಕೋಟಿ ರು
* ರಂಗಾರೆಡ್ಡಿ ಜಿಲ್ಲೆಯ ನಂದರ್ ಗುಲ್ ನಲ್ಲಿ 595 ಎಕರೆ ಮೊತ್ತ 1,800 ಕೋಟಿ ರು.
* ಕರ್ನೂಲ್ ನಲ್ಲಿ ಸುಣ್ಣದ ಗುತ್ತಿಗೆ ಪೆನ್ನಾ ಸಿಮೆಂಟ್ಸ್ ಮೌಲ್ಯ 3,000 ಕೋಟಿ ರು.
* ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಗೆ 329 ಎಕರೆ ಭೂಮಿ ಮಂಜೂರು. ಜಮೀನು ಮೌಲ್ಯ 10,000 ಕೋಟಿ ರು.
* ಅನಂತಪುರದಲ್ಲಿ ಲೇಪಾಕ್ಷಿ ನಾಲೆಜ್ ಹಬ್ ಗಾಗಿ ಉದ್ಯಮಿ ಇಂದು ಶ್ಯಾಮ್ ಪ್ರಸಾದ್ ರೆಡ್ಡಿಗೆ 8,844 ಎಕರೆ ಭೂಮಿ ಮಂಜೂರು. ಭೂಮಿ ಮೌಲ್ಯ 1,000 ಕೋಟಿ ರು.
ಇನ್ನೊಂದು ಮೂಲಗಳ ಪ್ರಕಾರ ಜಗನ್ ಅವರು ಸೃಷ್ಟಿಸಿದ ಬೇನಾಮಿ ಕಂಪನಿಗಳ ಆಸ್ತಿ ಮೊತ್ತ 43,000 ಕೋಟಿ ರು ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಕರ್ನಾಟಕದ ಮಲೆನಾಡು ಭಾಗಗಳಲ್ಲೂ ಜಗನ್ ಆಸ್ತಿ ಹೊಂದಿದ್ದಾರೆ.
ಬೇನಾಮಿ ಕಂಪನಿಗಳನ್ನು ಯಾವಾಗ ಸೃಷ್ಟಿಸಬೇಕು ಯಾವಾಗ ದಫನ್ ಮಾಡಬೇಕು ಎಂಬ ಸೂಕ್ಷ್ಮ ಸಂಗತಿಯನ್ನು ಅರಿತಿದ್ದ ಜಗನ್ ಹಾಗೂ ವಿಜಯ್ ಸಾಯಿರೆಡ್ಡಿ ಅವರು ಲಕ್ಸಂಬರ್ಗ್ ವಿದೇಶಿ ಕಂಪನಿ ವಿಷಯದಲ್ಲಿ ಎಚ್ಚರ ತಪ್ಪಿದ್ದು ಹೇಗೆ? ಕಂಪನಿಗಳ ಆಸ್ತಿ ವಿವರ, ಜಗನ್ ವೈಯಕ್ತಿಕ ಆಸ್ತಿ ವಿವರ ಬಹಿರಂಗಗೊಂಡಿದ್ದು ಹೇಗೆ ಎಂಬುದಕ್ಕೆ ಸಿಬಿಐ ಮಾತ್ರ ಉತ್ತರಿಸಬಲ್ಲದು.












Click it and Unblock the Notifications