ಪೊಲೀಸರಿಂದಲೇ ಮದುವೆಯಾದ ಯುವತಿ ಅಪಹರಣ

ವಡಿಗೇರಾ ಭವಿಷ್ಯತ್ತಿನ ತಾಲ್ಲೂಕು ಕೇಂದ್ರ ಎಂದೇ ಬಿಂಬಿತವಾಗಿರುವ ದೊಡ್ಡ ಹೋಬಳಿ. ಶಹಾಪುರ ತಾಲ್ಲೂಕಿನ ಕ್ರೈಂ ಪಟ್ಟಿಯಲ್ಲಿ ಈ ಗ್ರಾಮದ ಪಾಲು ತುಸು ಜಾಸ್ತಿನೇ. ಇಲ್ಲಿಯವರೆಗೆ ಈ ಗ್ರಾಮದಲ್ಲಿ ಕೊಲೆ ನಡೆದು ಸುದ್ದಿಯಾಗುತ್ತಿದ್ದವು. ಆದರೆ ಗುರುವಾರ ನಡೆದ ಘಟನೆ ಮಾತ್ರ ಆಘಾತವಾಗಿದೆ.
ಇದೇ ಗ್ರಾಮದ ಸಾಯಿಬಣ್ಣ ಎನ್ನುವರ ಮಗಳು ಇತ್ತೀಚಿಗೆ ವಿವಾಹವಾಗಿದ್ದ ರೇಣುಕಾಳ ಅಪಹರಣವಾಗಿದ್ದು, ಅದಕ್ಕೆ ಇಲ್ಲಿನ ವಡಗೇರಾ ಪೋಲಿಸ್ ಠಾಣೆಯ ಇಬ್ಬರು ಪೋಲಿಸರಾದ ಸುರೇಶ್ ಹಾಗೂ ವೀರೇಶ್ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ರೇಣುಕಾಳನ್ನು ಬೊಮ್ಮಚಟ್ನಳ್ಳಿ ಗ್ರಾಮದ ಹಣಮಂತ ಎನ್ನುವವರೊಂದಿಗೆ 2 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ವಡಗೇರಾಗೆ ಬಂದಿದ್ದ ಆಕೆಗೆ ವಿರೇಶ್ 500 ರುಪಾಯಿ ಕೊಟ್ಟಿದ್ದ. ಆದಾದ ನಂತರ ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಆಕೆಯ ಗೆಳತಿ ಪಾರ್ವತಿ ಜೊತೆ ರೇಣುಕಾಗೆ ಊರಿನ ಸಿಹಿ ನೀರಿನ ಬಾವಿ ಕಡೆ ನೀರು ತರಲು ಹೊಗಿದ್ದಾಳೆ. ಅಲ್ಲಿ ಬಾವಿಯಿಂದ ಪಾರ್ವತಿ ನೀರು ತೆಗೆದುಕೊಂಡು ಹೊರಗೆ ಬಂದು ನೋಡಿದಾಗ ರೇಣುಕಾ ಅಲ್ಲಿ ಇರಲಿಲ್ಲ.
ಈ ವಿಷಯ ತಿಳಿದು ಗಾಬರಿಗೊಂಡ ರೇಣುಕಾಳ ಕುಟುಂಬದವರು ಎಲ್ಲಾ ಕಡೆ ಹುಡುಕಿದ್ದಾರೆ. ಎರಡು ದಿನಗಳ ಹಿಂದಿನಿಂದ ನಡೆದ ಘಟನಾವಳಿಯನ್ನು ಅನುಸರಿಸಿ ಪೋಲಿಸ್ ಪೇದೆಗಳು ಮೊದಲಿನಿಂದಲೂ ರೇಣುಕಾಳನ್ನು ಪೀಡಿಸುತ್ತಿದ್ದು, ಅವರೇ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ರೇಣುಕಾಳ ಅಣ್ಣ ಸಿದ್ದಲಿಂಗಪ್ಪ ನೀಡಿದ ದೂರಿನಲ್ಲಿ ಹಲವಾರು ಅನುಮಾನಾಸ್ಪದ ಅಂಶಗಳಿದ್ದು, ವೀರೇಶ್ ಹಣ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಸುರೇಶ್ ಪಾತ್ರದ ಬಗ್ಗೆ ಹೇಳಲಾಗಿಲ್ಲ. ಎರಡು ದಿನಗಳ ಹಿಂದೆ ಬಲವಂತವಾಗಿ ಹಣ ನೀಡಲಾಗಿದೆ ಎಂದು ಹೇಳಲಾಗಿದ್ದರೂ ಕೂಡ ಆ ಸಂದರ್ಭದಲ್ಲಿ ಆಕೆಯ ಜೊತೆಗಿದ್ದ ಬಸಮ್ಮ ಈ ಕುರಿತು ಏನೂ ಹೇಳಿಲ್ಲ. ರೇಣುಕಾ ಜೊತೆಗಿದ್ದ ಪಾರ್ವತಿಗೆ ಇದೆಲ್ಲ ಗೊತ್ತಿದೆ ಎನ್ನುವ ಅನುಮಾನ ರೇಣುಕಾಳ ಅಣ್ಣನದಾಗಿದೆ.
ಪೋಲಿಸರ ವಿರುದ್ಧ ಬಂದ ದೂರನ್ನು ಅವರದೇ ಠಾಣೆಯ ಮೇಲಾಧಿಕಾರಿಗಳು ಸ್ವೀಕರಿಸಿದ್ದು ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಪೇದೆಗಳಾದ ವೀರೇಶ್ ಹಾಗೂ ಸುರೇಶ್ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಮೇಲೆ ಬಂದ ಆರೋಪಕ್ಕೆ ಇಂಬು ನೀಡುವಂತೆ ಪೋಲಿಸ್ ಠಾಣೆಯ ಕಡೆ ಸುಳಿದೇ ಇಲ್ಲ.
ಒಟ್ಟಾರೆ ರೇಣುಕಾ ಅಪಹರಣದ ಹಿಂದೆ ದೊಡ್ಡ ಪ್ರಮಾಣದ ಗೊಂದಲವಿದ್ದು ಸತ್ಯಾಸತ್ಯತೆ ಹೊರಬೀಳಬೇಕಾದರೆ ಪೇದೆಗಳ ವಿರುದ್ಧ ನಿಷ್ಟಕ್ಷಪಾತವಾಗಿ ಹಾಗೂ ಪಾರ್ವತಿ, ಬಸಮ್ಮನನ್ನು ಕೂಲಂಕುಷವಾಗಿ ವಿಚಾರಣೆಗೆಒಳಪಡಿಸಬೇಕಾಗಿದೆ. ಇದೆಲ್ಲದರ ನಡುವೆ, ಸುರೇಶ ಮತ್ತು ರೇಣುಕಾ ನಡುವೆ ಅನೈತಿಕ ಸಂಬಂಧವಿತ್ತು ಎಂಬ ವಿಷಯವೂ ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ಸತ್ಯ ಸಂಗತಿಯನ್ನು ಯಾವ ಬಲ್ಲ?












Click it and Unblock the Notifications