KAS ಮಹಾಂತೇಶ್ ಹಂತಕರು ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರು, ಜೂನ್ 8: ದಕ್ಷ ಕೆಎಎಸ್ ಅಧಿಕಾರಿ ಅವರ ದುರಂತ ಸಾವಿಗೆ ಬೆಂಗಳೂರು ಸಿಸಿಬಿ ಪೊಲೀಸರು ಅತ್ಯಂತ ಶ್ರಮವಹಿಸಿ, ಒಂದು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ಇಡೀ ನಾಡನ್ನೇ ಬೆಚ್ಚಿಬೀಳಿಸಿದ್ದ ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೂ ಹೇಗೆ ಎಂಬ ಕುತೂಹಲ ಮನೆಮಾಡಿದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಮೊದಲು ಬೆಂಗಳೂರು ಪೊಲೀಸರನ್ನು ಮಗದೊಮ್ಮೆ ಅಭಿನಂದಿಸೋಣ.

ಅನೇಕ ಊಹಾಪೋಹಗಳಿಗೆ ಆಹಾರವಾಗಿದ್ದ ಈ ಪ್ರಕರಣಕ್ಕೆ ಸದ್ಯಕ್ಕೆ ಪೊಲೀಸರು ವೃತ್ತಿ ಸಂಬಂಧಿ ಕಾರಣ ನೀಡಿ ಬಚಾವಾಗಿದ್ದಾರೆ. ಆದರೆ ಹಲವು ದಿಕ್ಕುಗಳಿಂದ ಇನ್ನೂ ಅನುಮಾನಗಳು ಸುಳಿದಾಡುತ್ತಿವೆ. ಮಹಾಂತೇಶ್ ಕೊಲೆ ಪ್ರಕರಣದ ಹಿಂದೆ ವಿಧಾನಸೌಧ ಸಚಿವಾಲಯದ ಕಾರ್ಯದರ್ಶಿಯೊಬ್ಬರ 'ಪಾತ್ರ'ವಿದೆ ಎಂಬ ಗುಮಾನಿಗಳಿದ್ದು, ಸಚಿವರೊಬ್ಬರು ಪ್ರಭಾವ ಬೀರಿ ಈ ಅಧಿಕಾರಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದಾರೆ.
ವೈಯಕ್ತಿಕ ಹಾಗೂ ವೃತ್ತಿ ಮತ್ಸರದ ಹಿನ್ನೆಲೆಯಲ್ಲಿ ಈ ಅಧಿಕಾರಿ ಕಿರಣ್‌ನನ್ನು ದಾಳವಾಗಿ ಬಳಸಿಕೊಂಡು ಮಹಾಂತೇಶ್ ಮೇಲಿದ್ದ ತಮ್ಮ ಹಗೆತನ ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸದರಿ ಅಧಿಕಾರಿ ಪರೋಕ್ಷವಾಗಿ ಈ ಕೃತ್ಯಕ್ಕೆ ಸಹಕಾರ ನೀಡಿದ್ದ. ಆದರೆ, ಹಿರಿಯ ಸಚಿವರೊಬ್ಬರ ಪ್ರಭಾವದಿಂದಾಗಿ ಪೊಲೀಸರು ಈ ಅಧಿಕಾರಿಯನ್ನು ವಿಚಾರಣೆಯಿಂದ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
'ಇಲ್ಲ. ಇದು ಖಡಾಖಂಡಿತವಾಗಿ ಮೀಸೆ ಚಿಗುರದ ಹುಡುಗ ಅಪ್ಪನ ಸಾವಿನ ನಂತರ ಅಪ್ಪಾಪೋಲಿಯಾಗಿ ಅಂಡಲೆಯಲು ದುರ್ಮಾಗಿಯಾಗಿದ್ದೇ ಮಹಾಂತೇಶ್ ಸಾವಿಗೆ ಕಾರಣ' ಎಂದು ಷರಾ ಬರೆದು ಕೈತೊಳೆದುಕೊಂಡಿದ್ದಾರೆ. ಆಯುಕ್ತ ಮರ್ಜಿ ಸಾಹೇಬರ ಈ ಮಾತನ್ನು ನಂಬಬಹುದಾದರೂ ಭವಿಷ್ಯದಲ್ಲಿ ಮತ್ತಷ್ಟು ಮಹಾಂತೇಶಗಳು ಅಮಾನವೀಯ ಸಾವು ಕಾಣಬಾರದು ಎಂಬ ನಿಟ್ಟಿನಲ್ಲಾದರೂ ಪೊಲೀಸರು ಸಮಗ್ರ ತನಿಖೆ ನಡೆಸುವ ಜರೂರತ್ತು ಹೆಚ್ಚಾಗಿದೆ.
ಇನ್ನು, ಮಹಾಂತೇಶ್ ಹತ್ಯಾ ರೂವಾರಿ ಕಿರಣ್ ಕುಮಾರನ ತಾಯಿ ಸುಮಿತ್ರಾ ಅವರೇ ಖುದ್ದು ಹೇಳಿರುವಂತೆ ಕಿರಣ್ ಕೋಪದ ಸ್ವಭಾವದವನು. ಆದರೆ, ಕೊಲೆ ಮಾಡುವಷ್ಟು ಧೈರ್ಯ ಅವನಲ್ಲಿರಲಿಲ್ಲವಂತೆ. ಇರಲಿ ಅದು ಹೆತ್ತಮ್ಮನ ಸಂಕಟ. ಆದರೆ ಮಹಾಂತೇಶ್ ಹೆತ್ತಮ್ಮ ವಿಜಯಮ್ಮ ಅವರ ಸಂಕಟ ನೋಡಿದಾಗ ಸುಪಾರಿ ಹಂತಕ ಕಿರಣ್ ಗೆ ತಕ್ಷ ಶಿಕ್ಷೆಯಾಗಲಿ ಎಂಬುದು ಪ್ರಜ್ಞಾವಂತರ ಕಳಕಳಿ. ಅದರ ಜತೆಗೆ ಕಿರಣ್ ಗೆ ನೆರವಾದ ಕೈಗಳು ಇನ್ನೂ ಯಾವುದಾದರೂ ಇವೆಯಾ? ಎಂಬುದರತ್ತ ತನಿಖೆ ನಡೆಸಬೇಕಾಗಿದೆ.
ಹಂತಕ ಪಡೆ ಸಿಕ್ಕಿಬಿದ್ದಿದಾದರೂ ಹೇಗೆ: ಇಷ್ಟಕ್ಕೂ ಹಂತಕ ಪಡೆಯಾದ ಸಂಜೀವ ನಗರದ ಕಿರಣ್‌ಕುಮಾರ್ ಅಲಿಯಾಸ್ ಕಿರಣ್ (23), ವೈಯಾಲಿಕಾವಲ್‌ನ ಅಯ್ಯಪ್ಪ (24), ಮಲ್ಲೇಶ್ವರ ಮುರಳಿ (29) ಹಾಗೂ ಸಂಪಂಗಿರಾಮನಗರದ ಶಿವಕುಮಾರ್ (28) ಸಿಸಿಬಿ ತಂಡಕ್ಕೆ ಸಿಕ್ಕಿಬಿದ್ದಿದಾದರೂ ಹೇಗಪ್ಪಾ ಅಂದರೆ...
ಹೆಬ್ಬಾಳ ಸಮೀಪದ ಸಹಕಾರನಗರದ ಪತ್ತಿ ಸಹಕಾರ ಸಂಘದಲ್ಲಿ ಕ್ಯಾಷಿಯರ್ ಕಿರಣ್ ಸುಮಾರು 50 ಲಕ್ಷ ರುಪಾಯಿ ಹಣ ದುರುಪಯೋಗ ನಡೆಸಿದ್ದ. ಇದನ್ನು ಲೆಕ್ಕ ಪರಿಶೋಧನೆಯ ವೇಳೆ ಮಹಾಂತೇಶ್ ಬೆಳಕಿಗೆ ತಂದಿದ್ದರು. ಈ ಹಗರಣ ತನ್ನ ತಲೆಗೆ ಸುತ್ತಿಕೊಳ್ಳಲಿದೆ ಎಂದೆಣಿಸಿದ ಕಿರಣ, ಸ್ನೇಹಿತರ ಮೂಲಕ ಮಹಾಂತೇಶ್ ಕೊಲೆ ಮಾಡಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.
ಇಲ್ಲೂ ಮೊಬೈಲ್ ದೂರವಾಣಿ ಪೊಲೀಸರ ಕೈಹಿಡಿಯಿತು: ಈ ಪ್ರಕರಣದ ತನಿಖೆ ವಿಷಯದಲ್ಲಿ ಪೊಲೀಸರು ಹರಸಾಹಸ ನಡೆಸಿದ್ದಾರೆ. ಅಂದರೆ ಘಟನೆ ನಡೆದ ದಿನ ಮಹಾಂತೇಶ್ ಅವರು ಸಂಚರಿಸಿದ ಮಾರ್ಗದಲ್ಲಿ ಬರುವ ಮೊಬೈಲ್ ಟವರ್‌ಗಳ ವ್ಯಾಪ್ತಿಯಲ್ಲಿನ ಎಲ್ಲಾ ಮೊಬೈಲ್ ದೂರವಾಣಿಗಳ ಕರೆ ಮಾಹಿತಿಯನ್ನು ಮೊದಲು ಸಂಗ್ರಹಿಸಿದ್ದಾರೆ. ಈ ಮೊಬೈಲ್ ದೂರವಾಣಿಗಳಲ್ಲಿ ಮಹಾಂತೇಶ್ ಅವರಿಗೆ ಪರಿಚಿತರಿರುವ ಮೊಬೈಲ್ ಸಂಖ್ಯೆಗಳು ಇವೆಯೇ ಎಂಬುದನ್ನು ಪತ್ತೆ ಮಾಡಲಾಗಿದೆ.
ಅಯ್ಯಪ್ಪ 'ಅಯ್ಯಯ್ಯಪ್ಪಾ': ಈ ಪೈಕಿ ಯಾವ ಮೊಬೈಲ್ ಸಂಖ್ಯೆಯ ಮಾಲೀಕ ಅದೇ ದಿನ ಈ ಮಾರ್ಗದಲ್ಲಿ ಸಂಚರಿಸಿದ್ದಾನೆ ಹಾಗೂ ಯಾವ ಸಮಯದಲ್ಲಿ ಸಂಚಾರ ನಡೆದಿದೆ ಎಂಬ ಮಾಹಿತಿ ಕಲೆಹಾಕಲಾಗಿದೆ. ಆಗ ಮಹಾಂತೇಶ್ ಅವರನ್ನು ಸಹಕಾರ ನಗರದಿಂದ ಏಟ್ರಿಯಾ ಹೊಟೇಲ್‌ವರೆಗೆ ಅಯ್ಯಪ್ಪ ಹಿಂಬಾಲಿಸಿರುವುದು ಪತ್ತೆಯಾಗಿದೆ. ಜತೆಗೆ, ಕೃತ್ಯ ನಡೆದ ಬಳಿಕ ಅಯ್ಯಪ್ಪನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದು ತನಿಖೆಗೆ ನಿರ್ಣಾಯಕ ತಿರುವು ನೀಡಿದೆ. ಈ ಸುಳಿವು ಪಡೆದು ಅಯ್ಯಪ್ಪನನ್ನು ಬಂಧಿಸಿ, ಅವನನ್ನು 'ಅಯ್ಯಯ್ಯಪ್ಪೋ' ಅನಿಸಿದಾಗ ಇಡೀ ಪ್ರಕರಣ ಬಿಚ್ಚಿಕೊಂಡಿದೆ.
ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ಜಂಟಿ ಪೊಲೀಸ್ ಆಯುಕ್ತರಾದ ಬಿ. ದಯಾನಂದ್, ಪ್ರಣವ ಮೊಹಾಂತಿ, ಡಿಸಿಪಿ ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ನಗರದ ಸುಮಾರು 200 ಪೊಲೀಸರು ಸಾಕಷ್ಟು ಬುದ್ಧಿಮತ್ತೆ ಪ್ರದರ್ಶಿಸಿ. ಆರೋಪಿಗಳನ್ನು ಬಂಧಿಸಿದ್ದಾರೆ. ಆ ಪೊಲೀಸ್ ಪಡೆಗೊಂದು hats-off ಹೇಳೋಣ.












Click it and Unblock the Notifications