ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಟಾನಿಕ್ ನೀಡಲಿದೆಯೆ ರಾಹುಲ್ ಆಗಮನ?

By Prasad
|
Google Oneindia Kannada News

Will Rahul Gandhi boost Congress spirit in Karnataka?
ಹುಬ್ಬಳ್ಳಿ, ಜೂ. 2 : ಬಿಜೆಪಿಯ ಭಿನ್ನಮತದ ಸೋಂಕನ್ನು ತಗುಲಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ ತನ್ನ ಇಮೇಜನ್ನು ಉತ್ತಮಪಡಿಸಿಕೊಳ್ಳಲು ಎರಡು ದಿನಗಳ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯತ್ತ ನೋಡುತ್ತಿದೆ.

ಜೂ. 11ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮಾಜಿ ಸಂಸದ ಸಿಎಂ ಇಬ್ರಾಹಿಂಗೆ ಟಿಕೆಟ್ ನೀಡಲಿಲ್ಲವೆಂದು ಮುನಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ಬಿಸಾಕಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಆಗಮನವಾಗಿದೆ. ಹೀಗಾಗಿ ಎಲ್ಲ ಕಾಂಗ್ರೆಸ್ ನಾಯಕರ ದೃಷ್ಟಿ ರಾಹುಲ್ ಮೇಲೆ ನೆಟ್ಟಿದೆ. ಈ ಕಾರ್ಯಕಾರಣಿಯಲ್ಲಿ ಬಿಕೆ ಹರಿಪ್ರಸಾದ್, ವೀರಪ್ಪ ಮೋಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಮಧುಸೂಧನ ಮೇಸ್ತ್ರಿ ಮುಂತಾದವರು ಭಾಗಿಯಾಗಿದ್ದಾರೆ, ಸಿದ್ದರಾಮಯ್ಯ ಹೊರತಾಗಿ.

ಮೊದಲ ಸಾಲಿನ ನಾಯಕರ ಪಡೆ ಕಾಂಗ್ರೆಸ್ಸಿನಲ್ಲಿ ಹನುಮಂತನ ಬಾಲದಂತಿದೆ. ಹೀಗಾಗಿ ತಮಗೆ ಸಿಗಬೇಕಾದ ಗೌರವ, ಸ್ಥಾನಮಾನ ಸಿಗುತ್ತಿಲ್ಲವೆಂದು ಸಿದ್ದರಾಮಯ್ಯ ಆಗಾಗ ಸಿಡಿದೇಳುತ್ತಲೇ ಇದ್ದರು. ವಿಧಾನಸಭೆ ಚುನಾವಣೆ ಬಂದರೂ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸುವ ಭರವಸೆಯೂ ಸಿದ್ದರಾಮಯ್ಯ ಅವರಲ್ಲಿ ಉಳಿದಿಲ್ಲ.

ರಾಜೀನಾಮೆ ನೀಡುತ್ತಿರುವುದು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರ, ಕಾಂಗ್ರೆಸ್ ಪಕ್ಷಕ್ಕಲ್ಲ ಎಂದು ಅವರು ಮೇಲಿಂದ ಮೇಲೆ ಹೇಳಿಕೆ ನೀಡುತ್ತಿದ್ದಾರಾದರೂ, ಅಂತರಾಳದಲ್ಲಿ ಜ್ವಾಲಾಮುಖಿ ಹೊಗೆಯಾಡುತ್ತಲೇ ಇದೆ. ಅದು ಯಾವಾಗ ಮತ್ತೆ ಸ್ಪೋಟಗೊಳ್ಳುತ್ತದೋ ಬಲ್ಲವರಾರು? ಕೆಲವರು ಅವರ ಕೋಪ ಶಮನಕ್ಕೆ ಯತ್ನಿಸುತ್ತಿದ್ದಾರೆ, ಆದರೆ ಹಲವರು ತೊಲಗಿದರೆ ಸಾಕು ಎಂಬ ಮನಸ್ಥಿತಿಯಲ್ಲಿಯೂ ಇರುವುದು ಗೌಪ್ಯವಾಗೇನೂ ಉಳಿದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ, ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಮುಗಿಲು ಮುಟ್ಟಿದೆ. ಪಕ್ಷದಲ್ಲಿಯೇ ಎರಡೆರಡು ಬಣಗಳು ಒಂದಕ್ಕೊಂದು ತಿಕ್ಕಾಡುತ್ತಿವೆ. ವಿರೋಧಿಗಳ ವಿಪರೀತ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಭುಗಿಲೆದ್ದಿರುವುದು ಕಾಂಗ್ರೆಸ್ಸಿಗೆ ಗಂಟಲಲ್ಲಿ ಸಿಕ್ಕಿದ ಬೆರಣೆಯಂತಾಗಿದೆ. ಪಕ್ಷದಲ್ಲಿ ಯುವಪಡೆಯನ್ನು ಬಲಪಡಿಸುವುದೋ, ಭಿನ್ನಮತ ಹತ್ತಿಕ್ಕಲು ಹೆಣಗಾಡುವುದೋ ಎಂಬ ಪರಿಸ್ಥಿತಿ ತಲೆದೋರಿದೆ.

ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದೆ. ಕರ್ನಾಟಕದಲ್ಲಿ ಕೂಡ ವಿಧಾನಸಭೆ ಚುನಾವಣೆ ವರ್ಷದೊಳಗೆ ತಲೆದೋರುವ ಲಕ್ಷಣಗಳು ಕಾಣಿಸುತ್ತಿವೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪ ಚುನಾವಣೆ ಹೊರತುಪಡಿಸಿದರೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಯಾವ ಉಪ ಚುನಾವಣೆಯಲ್ಲಿಯೂ ಜಯ ಸಾಧಿಸಲು ಕಾಂಗ್ರೆಸ್ ಸೋತಿದೆ.

ಇದೆಲ್ಲ ಗಮನಿಸುತ್ತಿರುವ ಕಾಂಗ್ರೆಸ್ ಹೈಕಮಾಂಡಿಗೆ ಪಕ್ಷ ಬಲಪಡಿಸುವ ಜರೂರತ್ತು ಹಿಂದೆಂದಿಗಿಂತಲೂ ಅಧಿಕವಾಗಿ ಕಂಡಿದೆ. ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಭಾನುವಾರ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕಗಳ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಶೋಕ್ ಲೇವಡಿ : ಪಕ್ಷ ಬಲಪಡಿಸಲು ರಾಹುಲ್ ಕರ್ನಾಟಕಕ್ಕೆ ಬಂದಿರುವುದು ತುಂಬಾ ಸಂತೋಷದ ಸಂಗತಿ, ನಾವು ಸ್ವಾಗತಿಸುತ್ತೇವೆ. ಯಾಕೆಂದರೆ, ರಾಹುಲ್ ಎಲ್ಲೆಲ್ಲಿ ಕಾಲಿಡುತ್ತಾರೆಯೋ ಅಲ್ಲೆಲ್ಲ ಕಾಂಗ್ರೆಸ್ ಚುನಾವಣೆಯಲ್ಲಿ ಹೀನಾಯ ಸೋಲುಂಡಿದೆ. ಇದು ಭವಿಷ್ಯದಲ್ಲಿ ಕಾಂಗ್ರೆಸ್ ಎದುರಿಸಲಿರುವ ಘಟನಾವಳಿಗೆ ಸೂಚನೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ನುಡಿದಿರುವ ಅಶೋಕ್ ಅವರು ರಾಹುಲ್ ಅವರ ಆಗಮನವನ್ನು ಲೇವಡಿ ಮಾಡಿದ್ದಾರೆ.

ಸಿದ್ದು ಬಿಜೆಪಿ ಸೇರಿದರೆ ಸ್ವಾಗತ : ಕಾಂಗ್ರೆಸ್ಸಿನ ನಿರ್ಲಕ್ಷ್ಯ ನೀತಿಯಿಂದ ಬೇಸತ್ತಿರುವ ಸಿದ್ದರಾಮಯ್ಯ ಅವರು ಬಿಜೆಪಿ ಸೇರಿದರೆ ಸ್ವಾಗತ. ಆದರೆ, ಹಿರಿಯ ನಾಯಕರೊಡನೆ ಮಾತುಕತೆ ನಡೆಸಿದ ನಂತರ ಇದರ ಬಗ್ಗೆ ಬಿಜೆಪಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ. ಈ ಹಿಂದೆ ಕೂಡ ಸಿದ್ದರಾಮಯ್ಯ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಗುಲ್ಲು ಹಬ್ಬಿತ್ತು. ಅದನ್ನೆಲ್ಲವನ್ನು ನಿರಾಕರಿಸಿದ್ದ ಸಿದ್ದರಾಮಯ್ಯ ನಗುನಗುತ್ತಲೇ ಕಾಂಗ್ರೆಸ್ಸಿನಲ್ಲಿ ಮುಂದುವರೆದಿದ್ದರು.

English summary
Congress General Secretary Rahul Gandhi's two-day visit to Karnataka from July 2 is expected to give a fillip to the sagging spirits of the party, which is trying to cash in on infighting in the ruling BJP. Revolting Siddaramaiah has stayed away from executive meet. ಕಾಂಗ್ರೆಸ್ಸಿಗೆ ಟಾನಿಕ್ ನೀಡಲಿದೆಯೆ ರಾಹುಲ್ ಆಗಮನ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X