ಆಧಾರವಿಲ್ಲದ ಆರೋಪಕ್ಕೆ ಬೆಲೆ ಇಲ್ಲ: ಎಸ್ಸೆಂ ಕೃಷ್ಣ

ಟೀಂ ಅಣ್ಣಾ ಮಾಡಿರುವ ಆರೋಪಗಳೆಲ್ಲ ಸುಳ್ಳು, ಹೆಸರು ಹಾಳು ಮಾಡಲು ಮಾಡಿರುವ ಕುತಂತ್ರ ಎಂದು ಎಸ್ಸೆಂ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
1999 ರಿಂದ 2004 ರ ವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ತಮ್ಮ ಅಧಿಕಾರಾವಧಿಯಲ್ಲಿ ಅರಣ್ಯಕ್ಕೆ ಮೀಸಲಾದ ಭೂಮಿಯನ್ನು ಡಿರಿಸರ್ವ್ ಮಾಡಿ ಅನಧಿಕೃತ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಅವರ ಮೇಲಿರುವ ಆರೋಪವಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಎಸ್ಸೆಂ ಕೃಷ್ಣ, ಧರಂ ಸಿಂಗ್ ಹಾಗು ಜೆ.ಡಿ.(ಎಸ್) ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗು ಇತರ 11 ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಪೊಲೀಸರು ಎಫ್.ಐ. ಆರ್ ದಾಖಲಿಸಿದ್ದರು.
ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಎಸ್ಸೆಂಕೃಷ್ಣ ವಿರುದ್ಧದ ತನಿಖೆಗೆ ಸುಪ್ರೀಂ ತಡೆಯಾಜ್ಞೆ ನೀಡಿತ್ತು. ಅಲ್ಲದೆ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಕೂಡಾ ಎಸ್ಸೆಂ ಕೃಷ್ಣ ಅವರಿಗೆ ಕ್ಲೀನ್ ಚೀಟ್ ನೀಡಿದ್ದರು. ಲೋಕಾಯುಕ್ತ ವರದಿ 2 ರಲ್ಲಿ ಎಸ್ಸೆಂ ಕೃಷ್ಣ ಅವಧಿಯನ್ನು ಪರಿಗಣಿಸಿಲ್ಲ. ಮೊದಲ ವರದಿಯಲ್ಲೂ ಅವರ ಹೆಸರು ಪ್ರಸ್ತಾಪಿಸಿಲ್ಲ ಎಂದು ಹೆಗ್ಡೆ ಹೇಳಿದ್ದರು.
'50 ವರ್ಷದ ನನ್ನ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಅಕ್ರಮ ಸಂಪಾದನೆಯತ್ತ ಗಮನ ಹರಿಸಿಲ್ಲ. ಟೀಂ ಅಣ್ಣಾ ಮಾಡುತ್ತಿರುವ ಆರೋಪಗಳಿಗೆ ಆಧಾರವಿಲ್ಲ. ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರಿಲ್ಲ. ಟೀಂ ಅಣ್ಣಾ ಆರೋಪಗಳ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವರದಿ ನೀಡುತ್ತೇನೆ' ಎಂದು ಕೃಷ್ಣ ಹೇಳಿದ್ದಾರೆ.
ಅಕ್ರಮಗಳ ಮೊತ್ತ: ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರ ಸ್ವಾಮಿ ಹಾಗೂ ಧರಂ ಸಿಂಗ್ ಅವರುಗಳು ತಮ್ಮ ಆಡಳಿತಾವಧಿಯಲ್ಲಿ ನಿಯಮ ಮೀರಿ ಗಣಿಗಾರಿಕೆಗೆ ಪರವಾನಿಗೆ ನೀಡಿದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಆಗಿರುವ ಅಂದಾಜು ನಷ್ಟ 299,42,72,022 ರೂ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಟಿ.ಜೋಸೆಫ್ ಆರೋಪಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ, ಕರ್ನಾಟಕ ಅರಣ್ಯ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ, ಸುಮಾರು 7000 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ.
ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿಯಲ್ಲಿ (1999 ಅ.18ರಿಂದ 2004ರ ಮೇ 28ರವರೆಗೆ) ಗಣಿ ಮತ್ತು ಭೂ ವಿಜ್ಞಾನ ಕಾಯ್ದೆ ಮತ್ತು ಮೈನಿಂಗ್ ನಿಯಮಗಳನ್ನು ಉಲ್ಲಂಘಿಸಿ ಸಂರಕ್ಷಿತ ಅರಣ್ಯ ಪ್ರದೇಶ ಸೇರಿದಂತೆಸುಮಾರು 6832.48 ಹೆಕ್ಟೇರ್ ಪ್ರದೇಶವನ್ನು ಡಿ-ರಿಸರ್ವೇಷನ್ ಮಾಡಿದ್ದಾರೆ.
ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಮೈಸೂರು ಮಿನರಲ್ಸ್, ಡೆಕ್ಕನ್ ಮೈನಿಂಗ್ ಕಂಪೆನಿ ಸೇರಿದಂತೆ 10 ಕಂಪೆನಿಗಳಿಗೆ ಅನುಮತಿ ನೀಡಿದ್ದಾರೆ. ಇದಲ್ಲದೆ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು 84 ಅಕ್ರಮ ಪರವಾನಗಿ ನೀಡಿದ್ದಾರೆ ಎಂಬ ಆರೋಪವಿದೆ.












Click it and Unblock the Notifications