ಯಡಿಯೂರಪ್ಪ, ಅನಂತ್ ಒಂದಾದರೆ? ಎಷ್ಟು ಕಾಲ?
ಬೆಂಗಳೂರು, ಮೇ 30: ಮೊನ್ನೆಮೊನ್ನೆಯಷ್ಟೇ ಬಿಜೆಪಿ ಸಂಸದ ಎಚ್.ಎನ್. ಅನಂತಕುಮಾರ್ ಅವರನ್ನು ವಾಚಾಮಗೋಚರ ಬೈದು ಬಸವಳಿದಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈಗ ಅನಂತ್, ನಾನು ಮತ್ತೆ ಭಾಯಿ ಭಾಯಿ ಎನ್ನುತ್ತಿದ್ದಾರೆ! ಇದನ್ನು ಕನ್ನಡದ ಕುಲಕೋಟಿ ಜನ ನಂಬಬೇಕಾಗಿದೆ.

ಮೇಲ್ಮನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಈ ಧೀಮಂತ ನಾಯಕರು ತಾವು ಒಂದಾಗಿದ್ದೇವೆ ಎಂದು ನಿನ್ನೆ ತೋರಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ಮಲ್ಲೇಶ್ವರಂನಲ್ಲಿರುವ ಭಾರತೀಯ ಜನತಾ ಪಕ್ಷದ ಅಧಿಕೃತ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಆಯೋಜಿಸಲಾಗಿತ್ತು. ಅಲ್ಲಿ ಈ ಹಕ್ಕ-ಬುಕ್ಕರು ಮುಖಾಮುಖಿಯಾಗಿ ಮಾತನಾಡಿದ್ದಾರೆ.
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯೆಂದರೆ ಬಿಜೆಪಿಯಲ್ಲಿ ಈಗ ಐಕ್ಯತೆಯ ಮಂತ್ರ ಮೊಳಗುತ್ತಿದೆ. ಬಿಜೆಪಿಯ ದೆಹಲಿ ನಾಯಕರೂ ಸೇರಿದಂತೆ ಇಡೀ ನಿಜೆಪಿ ಮಂದಿ ಇಂದು ಯಡಿಯೂರಪ್ಪ ಅವರ ಮೊಮ್ಮಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ತನ್ಮೂಲಕ ನಾವು ನಿಮ್ಮೊಂದಿಗೆದ್ದೇವೆ ಎಂದು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದಾರೆ. ಏಕೆಂದರೆ ಮೊನ್ನೆ ಸಿಬಿಐ ಅಟಕಾಯಿಸಿಕೊಂಡಾಗ ಯಾವೊಬ್ಬ ಬಿಜೆಪಿ ನಾಯಕನೂ ಕನಿಷ್ಠ ಸೌಜನ್ಯಕ್ಕಾದರೂ ತನ್ನನ್ನು ಮಾತನಾಡಿಸಿಸಲಿಲ್ಲ ಎಂಬುದು ಯಡಿಯೂರಪ್ಪನವರ ಕೂಗು, ಕೊರಗು ಆಗಿತ್ತು.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಆರ್ ಅಶೋಕ್ ಮತ್ತು ಆರ್ ಎಸ್ಎಸ್ ನ ಸಂತೋಷ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಯಡಿಯೂರಪ್ಪ ಮತ್ತು ಅನಂತ್ ಇಬ್ಬರೂ ಉಭಯಕುಶಲೋಪರಿ ಬಳಿಕ, 'ಏನ್ರೀ ಅನಂತ್ ನೀವು ದೆಹಲಿಗೆ ಹೋಗಲಿಲ್ವಾ?' ಎಂದು ಯಡಿಯೂರಪ್ಪ ಕೇಳಿದ್ದಾರೆ. ಅದಕ್ಕೆ ಅನಂತ್ 'ಇಲ್ಲಾ ನಾಳೆ ಹೋಗ್ತೀನಿ' ಎಂದು ನಗುನಗುತ್ತಲೇ ಉತ್ತರಿಸಿದ್ದಾರೆ.
ಇದನ್ನು ಇತರೆ ನಾಯಕರು ಮೂಕವಿಸ್ಮಿತರಾಗಿ ನೋಡಿದ್ದಾರೆ. ಏಕೆಂದರೆ ಈ ಇಬ್ಬರೂ ಬದ್ಧವೈರಿಗಳು ಇಂದು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಮೊದಲೇ ಅರಿತಿದ್ದ ಈ ನಾಯಕರು ಸರಿ ಇನ್ನೇನು ರಾಮಾಯಣ ಕಾದಿದೆಯೋ ಇಂದು. ಇಬ್ಬರೂ ನೇರಾನೇರಾ ಶರಂಪರ ಕಿತ್ಲಾಡಿಕೊಂಡು ಪಕ್ಷದ ಮಾನ ಮರ್ಯಾದೆ ಹರಾಜುಹಾಕುತ್ತಾರೆ ಎಂದು ಗಾಬರಿಗೆ ಬಿದ್ದಿದ್ದರು. ಆದರೆ ತಾವು ಎಂಥ ರಾಜಕೀಯ ಮುತ್ಸದ್ಧಿಗಳು ಎಂಬುದನ್ನು ಬದ್ಧವೈರಿಗಳು ಸಾಬೀತುಪಡಿಸಿದರು. ತೋರ್ಪಡಿಕೆಗಾದರೂ ತಮ್ಮ ವೈರತ್ವವವನ್ನು ಮರೆತು ಹಲೋ ಹಲೋ ಅಂದರು.
ಆದರೆ ಯಡಿಯೂರಪ್ಪನವರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ, ಮುಂದಿನದನ್ನು ನೀವೇ ತೀರ್ಮಾನಸಿಕೊಳ್ಳಿ ಎಂದು ಸಭೆಯಿಂದ ಎದ್ದು ಹೊರನಡೆದರು ಎನ್ನಲಾಗಿದೆ.
ತೋಂಟದಾರ್ಯ ಮತ್ತು ಡಿ ಎಸ್ ವೀರಯ್ಯ ತನ್ನ ಅಭ್ಯರ್ಥಿಗಳು ಎಂದ ಯಡಿಯೂರಪ್ಪನವರು ವಿಧಾನಸಭೆ ಕ್ಷೇತ್ರದಿಂದ ಬಿಜೆ ಪುಟ್ಟಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಸೂಚಿಸಿದರು. ಆದರೆ ಇದಕ್ಕೆ ಆರ್ ಎಸ್ಎಸ್ ನಾಯಕರು ಸ್ಥಳದಲ್ಲೇ ನಕಾರ ಸೂಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಅನಂತ್ ತಮ್ಮ ಕಡೆಯಿಂದ ಬೆಂಗಳೂರು ಸುಬ್ಬಣ್ಣ ಅವರ ಹೆಸರನ್ನು ಸೂಚಿಸಿದ್ದಾರೆ. ಗಮನಾರ್ಹವೆಂದರೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಭಾನುಪ್ರಕಾಶ್, ರಘುನಾಥ್ ಮಲಕ್ಕಾಪುರೆ ಮತ್ತು ಗೋಪಿನಾಥ್ ರೆಡ್ಡಿ ಅವರ ಹೆಸರಿಗಳಿಗೆ ಆರ್ ಎಸ್ಎಸ್ ಅಂಕಿತ ಹಾಕಿದೆ ಎನ್ನಲಾಗಿದೆ. ಹಾಗೆಯೇ, ಅಶೋಕ್ ಮತ್ತು ಅನಂತ್ ಗೆ ವಿಮಲಾ ಗೌಡ ಅವರನ್ನು ನೇಮಿಸುವ ಉಮೇದಿಯಿದೆ. ಡಾ. ಮಂಗಳಾ ಶ್ರೀಧರ್ ಅವರನ್ನೂ ನೇಮಿಸುವ ಇರಾದೆಯಿದೆ.
ಕ್ರಿಕೆಟ್ ತಾರೆ ಅನಿಲ್ ಕುಂಬ್ಲೆ ಮತ್ತು ಸಿನಿತಾರೆ ತಾರಾ ಅವರನ್ನು ಮೇಲ್ಮನೆಗೆ ನಾಮಾಂಕಿತಗೊಳಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಈ ಹೆಸರುಗಳನ್ನೆಲ್ಲ ಸಭೆಯಲ್ಲಿ ಓದಿ ಹೇಳಿದಾಗ ಎಲ್ಲ ನಾಯಕರು ಧ್ವನಿಮತದಿಂದ ಒಪ್ಪಿಗೆ ಸೂಚಿಸಿದರು ಎಂದಿ ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications