ಅಮ್ಮ ಎಲ್ಲಿದ್ದೀಯಮ್ಮ ಬಂದು ಕರಕೊಂಡು ಹೋಗಮ್ಮ

ಇದು ಯಾದಗಿರಿ ರೈಲು ನಿಲ್ದಾಣದಲ್ಲಿ ಕಳೆದ ಭಾನುವಾರ ಪತ್ತೆಯಾದ ಪುಟಾಣಿ ಮಗುವಿನ ಹೃದಯ ಕಲಕುವ ಕಥನ. ನಾಲ್ಕು ದಿನಗಳಿಂದ ಅಮ್ಮನಿಗಾಗಿ ಒಂದೇ ಸವನೆ ಹಂಬಲಿಸುತ್ತಿದೆ. ಮಗುವಿನ ಕೂಗು ಹೆತ್ತ ತಾಯಿಗೆ ಇನ್ನೂ ತಲುಪಿಲ್ಲ. ಅನಾಥವಾಗಿರುವ ಮಗು ತಮ್ಮದೆಂದು ಹುಡುಕಲು ಯಾರೂ ಬಂದಿಲ್ಲ.
ಮೂರು ವರ್ಷದ ಕಂದಮ್ಮನನ್ನು ಪೋಷಕರೇ ಯಾದಗಿರಿ ರೈಲು ನಿಲ್ದಾಣದಲ್ಲಿ ಇಳಿಸಿ, ತಾವು ಬಂದ ರೈಲು ಹತ್ತಿದ್ದಾರೆ. ಮಗು ತೆಲುಗಿನಲ್ಲಿ ಮಾತನಾಡುತ್ತಿದ್ದು ಪಾಲಕರು ಆಂಧ್ರ ಪ್ರದೇಶದಲ್ಲಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಒಂದೇ ಸವನೆ ಅಳುತ್ತಿದ್ದ ಮಗುವನ್ನು ನೋಡಿದ ಹಣ್ಣು ಮಾರುವ ಮಹಿಳೆಯೊಬ್ಬಳು ಸಂತೈಸಲು ಯತ್ನಿಸಿದ್ದಾಳೆ.
ನಂತರ ಮಗುವನ್ನು ರಾಯಚೂರು ಮೂಲದ ಮೆಹಬೂಬ್ ಎಂಬುವವರ ಬಳಿಗೆ ಬಿಟ್ಟಿದ್ದಾಳೆ. ಎರಡು ದಿನ ರಾಯಚೂರಿನಲ್ಲಿ ಕಳೆದ ನಂತರ ಮತ್ತೆ ಯಾದಗಿರಿಗೆ ಮಗುವನ್ನು ಕರೆತಂದಿದ್ದಾರೆ. ರೈಲು ನಿಲ್ದಾಣಕ್ಕೆ ಮಗುವಿನ ಪಾಲಕರು ಬಂದು ಕರೆದುಕೊಂಡು ಹೋಗಬಹುದೆಂದು ನಿರೀಕ್ಷೆ ಮಾಡಿದ್ದಾರೆ. ಯಾರೂ ಬರದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ ಮೆಹಬೂಬ್.
ಜಯ ಕರ್ನಾಟಕ ಸಂಘಟನೆ ಸಹಕಾರದೊಂದಿಗೆ ಹೆಣ್ಣು ಮಗುವನ್ನು ಯಾದಗಿರಿ ನಗರ ಸಿಪಿಐ ಪೊಲೀಸ್ ಕಚೇರಿಗೆ ಮೆಹಬೂಬ್‌ನ ಸಂಬಂಧಿಕರು ಕರೆ ತಂದಿದ್ದಾರೆ. ಪೊಲೀಸರು ಮಗುವನ್ನು ಡಾನ್ ಬಾಸ್ಕೋ ಸೇವಾ ಕೇಂದ್ರ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗು ಸೇವಾ ಕೇಂದ್ರದ ಆರೈಕೆಯಲ್ಲಿದೆ.












Click it and Unblock the Notifications