ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಟರ್ಕಿ ಮಹಿಳೆಯ ರಾದ್ಧಾಂತ

ಮೊನಾಕೋ ರೋರಾ ಎಂಬ ಈ ಟರ್ಕಿ ಮಹಿಳೆ ಮಂಗಳೂರಿನಲ್ಲಿ ಕೆಎಸ್ಆರ್ ಟಿಸಿ ಬಸ್ ಹತ್ತಿದ್ದರು. ಆದರೆ ಬಸ್ಸು ಜ್ಯೋತಿ ಸರ್ಕಲ್ ಬಳಿಗೆ ಬಂದಾಗ ಬಸ್ ಸಿಬ್ಬಂದಿ ನನ್ನನ್ನು ಬಲವಂತವಾಗಿ ಕೆಳಗಿಳಿಯುವಂತೆ ಮಾಡಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಆಗ ದೊಡ್ಡ ನಾಟಕವೇ ನಡೆದಿದೆ.
ಪ್ರಯಾಣಿಕರಿಂದ ತುಂಬಿದ್ದ ಸದರಿ ಬಸ್ ಲಾಲ್ ಬಾಗ್ ಬಸ್ ಸ್ಟಾಂಡಿನಿಂದ 10.30ಕ್ಕೆ ಬಿಟ್ಟಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ಮಹಿಳೆ ರಾದ್ದಾಂತ ಎಬ್ಬಿಸಿದಳು ಎಂದು ಸಹ ಪ್ರಯಾಣಿಕರು ದೂರಿದ್ದಾರೆ. ಟಿಕೆಟ್ ಗೆ ಸಂಬಂಧಿಸಿದಂತೆ ಈ ಜಗಳ ಶುರುವಾಗಿದೆ. ಮೊದಲು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ ನಂತರ, ಕಂಡಕ್ಟರ್ ಪ್ರದೀಪ್ ಗೂ ಆವಾಜ್ ಹಾಕಿದ್ದಾಳೆ. ಮುಂದೆ ಅದು ತಾರಕಕ್ಕೇರಿದೆ.
ಕಂಡಕ್ಟರ್ ಹೇಳುವ ಪ್ರಕಾರ ಆ ವಿವಾದಿತ ಮಹಿಳೆಯೇ ಮೊದಲು ಆತನನ್ನು ಬಸ್ಸಿನಿಂದ ಕೆಳಗೆ ತಳ್ಳಿದ್ದಾಳೆ. ಜತೆಗೆ ಹೊಡೆದೂ ಬಡಿದೂ ಸಹ ಮಾಡಿದ್ದಾಳೆ. ಕದ್ರಿ ಪೊಲೀಸರಿಗೆ ವಿಷಯ ತಲುಪಿ ತಕ್ಷಣ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹಿಳೆ, ಕಂಡಕ್ಟರ್ ಮತ್ತು ಚಾಲಕನನ್ನು ಬಸ್ಸಿನ ಸಮೇತ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಇತರೆ ಪ್ರಯಾಣಿಕರಿಗೆ ಬೇರೆ ವಾಹನ ವ್ಯವಸ್ಥೆ ಮಾಡಿ, ಬೆಂಗಳೂರಿಗೆ ಕಳಿಸಿದ್ದಾರೆ.
ಮೊನಾಕೋ ರೋರಾ ಎಂಬ ಈ ಟರ್ಕಿ ಮಹಿಳೆಯ ಬಳಿ ಭಾರತದ ಪ್ಯಾನ್ ಕಾರ್ಡ್ ಇದೆ. ಮಹಿಳೆ ಮದ್ಯ ಸೇವಿಸಿದ್ದಳು. ಜತೆಗೆ, ಇತರೆ ಕಾನೂನುಬಾಹಿರ ವಸ್ತುಗಳನ್ನೂ ಹೊಂದಿದ್ದಳು. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications