ಎಚ್ ಪಿ ಟೆಕ್ಕಿ ಶ್ರೀರಾಜು ಕೊಲೆಗೆ LOVE ಕಾರಣ?

ರಾಜು ಅವರನ್ನು ಯಾರು ಸಾಯಿಸಿದರು? ಏತಕ್ಕೆ ಸಾಯಿಸಿದರು? ಕೊಲೆ ಹಿಂದಿನ ಉದ್ದೇಶವೇನು? ಎಂಬ ಪ್ರಶ್ನೆಗಳನ್ನು ಹೊತ್ತ ಮಹದೇವಪುರ ಪೊಲೀಸರಿಗೆ ಕೆಲವರು ಮಹತ್ವದ ಸುಳಿವುಗಳು ಲಭ್ಯವಾಗಿದೆ. ಎಚ್ ಪಿ ಸಂಸ್ಥೆ ವಕ್ತಾರರು ಕೂಡಾ ರಾಜು ಉತ್ತಮ ಉದ್ಯೋಗಿ, ಕಚೇರಿಯಲ್ಲಿ ಯಾವುದೇ ಕೆಟ್ಟ ನಡವಳಿಕೆ ಕಂಡು ಬಂದಿರಲಿಲ್ಲ ಎಂದಿದ್ದಾರೆ.
ಆ ಕರೆ ಮಾಡಿದ್ದು ಯಾರು?: ದೊಡ್ಡಮ್ಮನ ಮನೆಗೆ ಹೋಗಿದ್ದ ಶ್ರೀರಾಜು ಮನೆಗೆ ಬಂದ ಮೇಲೆ ನಸುಕಿನ ಜಾವ 2 ರ ಸುಮಾರಿಗೆ ಒಂದು ಕರೆ ಬಂದಿದೆ. ಕರೆ ಸ್ವೀಕರಿಸಿ ಟೆರೆಸ್ ಮೇಲೆ ಹೋಗಿ ಸುಮಾರು ಅರ್ಧ ಗಂಟೆ ಮಾತನಾಡಿದ ಶ್ರೀರಾಜು ಎತ್ತರದ ದನಿ ಕೇಳಿ ಮನೆ ಮಾಲೀಕರಿಗೂ ಎಚ್ಚರವಾಗಿದೆ. ಆದರೆ, ಆ ಸಮಯದಲ್ಲಿ ರಾಜುವನ್ನು ವಿಚಾರಿಸಲು ಹೋಗಿಲ್ಲ. ವಿಚಾರಿಸಿದ್ದರೆ ರಾಜು ಜೀವ ಉಳಿಯುತ್ತಿತ್ತೋ ಏನೋ.. ಇರಲಿ..
ಕರೆ ಕಟ್ ಮಾಡಿದ ಮೇಲೆ ರಾಜು ಫಾರ್ಮಲ್ ಡ್ರೆಸ್, ಶೂ ಧರಿಸಿ ವೋಕ್ಸ್ ವ್ಯಾಗನ್ ಕಾರು ತೆಗೆದುಕೊಂಡು ಹೊರಕ್ಕೆ ಹೋಗಿದ್ದಾನೆ. ಆದರೆ, ರಾಜು ಮತ್ತೆ ಮನೆಗೆ ಮರಳಲಿಲ್ಲ. ರಾಜು ಶವವಿದ್ದ ಕಾರಿನಲ್ಲಿ ಯಾವ ವಸ್ತುಗಳನ್ನು ಕದ್ದಿಲ್ಲ. ರಾಜು ಬಳಿ ಇದ್ದ ಚಿನ್ನದ ಚೈನು, ವಾಚು, ಫೋನು, ಪರ್ಸ್ ಎಲ್ಲವೂ ಹಾಗೆ ಇದೆ. ಹೊರಗಡೆಯಿಂದ ಕಾರನ್ನು ನೋಡಿದರೆ ಯಾರೋ ಒಳಗೆ ಸುಮ್ಮನೆ ಕುಳಿತಿರುವಂತೆ ಕಾಣುತ್ತಿತ್ತು.
ಪ್ರೇಮ ಪ್ರಕರಣ: ರಾಜು ಕೊಲೆ ಇಷ್ಟೊಂದು ನಾಜೂಕಾಗಿ ನಡೆದಿರುವುದು ಗಮನಿಸಿದರೆ, ಇದು ಪರಿಚಿತರ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಯುವತಿಯೊಬ್ಬಳ ಪ್ರೇಮಪಾಶಕ್ಕೆ ರಾಜು ಸಿಕ್ಕಿಬಿದ್ದಿದ್ದ. ರಾಜು ಪ್ರೇಮ ವಿಚಾರ ಆತನ ಮೊಬೈಲ್, ಚಾಟಿಂಗ್ ನಿಂದ ತಿಳಿದು ಬಂದಿದೆ. ಮನೆ ಮಾಲೀಕ ಗೌತಮ್ ಅವರು ಕೂಡಾ ರಾಜು ತಡರಾತ್ರಿಯಾದರೂ ಮಾತನಾಡುತ್ತಾ, ಕಿರುಚಾಡುತ್ತಿದ್ದರು ಎಂದು ಹೇಳಿಕೆ ಕೊಟ್ಟಿದ್ದಾರೆ.
ರಾಜು ಜೊತೆಗಿದ್ದ ಗೆಳೆಯ ವಿಕ್ರಮ್ ಕೂಡಾ ನನಗೆ ರಾಜು ಮನೆಯಿಂದ ಹೊರಟ ವಿಷ್ಯ ಹೇಳಿರಲಿಲ್ಲ. ಅವನಿಗೆ ಲವ್ ಅಫೇರ್ ಇದ್ದಿದ್ದು ನಿಜ ಎಂದಿದ್ದಾನೆ. ರಾಜು ಪ್ರೀತಿಸುತ್ತಿದ್ದ ಹುಡುಗಿ ಅಥವಾ ಆಕೆ ಕಡೆಯವರಿಂದ ರಾಜುಗೆ ಅಪಾಯ ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸದ್ಯಕ್ಕೆ ರಾಜು ಲವರ್ ಹುಡುಕಾಟದಲ್ಲಿದ್ದಾರೆ. ರಾಜು ಅಪ್ಪ, ಅಮ್ಮ ಮುಂಬೈನಲ್ಲಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಶವವಾಗಿ ಮಲಗಿರುವ ಮಗನನ್ನು ನೋಡಲು ಬರುತ್ತಿದ್ದಾರೆ.












Click it and Unblock the Notifications