ಸದಾನಂದ-ಶೋಭಾ ಮೇಡಂ ಮೊನ್ನೆ ಕಿತ್ಲಾಡ್ಕೊಂಡ್ರಾ?

ಸಿಎಂ ಸದಾನಂದರು ಕಳೆದ ವಾರ ಮಧ್ಯಾಹ್ನ 3 ಗಂಟೆಯಾದರೆ ಸಾಕು ವಿಧಾನಸೌಧದಲ್ಲಿ ಉನ್ನತಾಧಿಕಾರಿಗಳ ಸಭೆ ಕರೆದು, ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಗಳನ್ನು ನಿರಂತರವಾಗಿ ನಡೆಸಿದ್ದರು ಎಂಬುದು ತಿಳಿದ ವಿಷಯವೇ. ಆದರೆ ಈ ಸರಣಿ ಸಭೆಗಳ ಸಂದರ್ಭದಲ್ಲಿ ಸದಾನಂದರು ಇಂಧನ ಇಲಾಖೆಯ ಸಭೆಯನ್ನು ನಡೆಸುತ್ತಿದ್ದರು. ಆದರೆ ಆ ಸಭೆಯ ಬಗ್ಗೆ ಸಂಬಂಧಪಟ್ಟ ಸಚಿವೆಗೆ ಸದಾನಂದರು ತಿಳಿಸಿರಲಿಲ್ಲ. ಅಂದರೆ ಸಚಿವೆ ಶೋಭಾ ಅನುಪಸ್ಥಿತಿಯಲ್ಲಿ ಇಂಧನ ಇಲಾಖೆ ಸಭೆ ನಡೆದಿತ್ತು.
ಇದು ಶೋಭಾ ಮೇಡಂ ಗಮನಕ್ಕೆ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ. ವಿಷಯ ತಿಳಿದವರೆ ಸೀದಾ ಸಭಾಂಗಣಕ್ಕೆ ನುಗ್ಗಿದ್ದಾರೆ. ಏನು ಗೌಡ್ರೆ, ಏನಿದೆಲ್ಲ? ನಿಮ್ದು ಅತಿಯಾಯ್ತು ಎನ್ನುವ ಧಾಟಿಯಲ್ಲಿ 'ಮುಖ್ಯಮಂತ್ರಿಗಳು ಸಭೆಯ ಬಗ್ಗೆ ನನಗೆ ಮೊದಲೇ ತಿಳಿಸಬೇಕಿತ್ತು, ನನ್ನ ಇಂಧನ ಇಲಾಖೆಯ ಬಗ್ಗೆ ಸಭೆ ನಡೆಯುತ್ತಿರುವಾಗ ನನ್ನನ್ನು ಏಕೆ ಕತ್ತಲಲ್ಲಿ ಇಟ್ಟಿರಿ?' ಎಂದು ಸ್ವಲ್ಪ ಜೋರು ದನಿಯಲ್ಲೇ ಅಧಿಕಾರಿಗಳ ಸಮ್ಮುಖದಲ್ಲಿ ಗುಟುರು ಹಾಕಿದ್ದಾರೆ.
ಅನಿರೀಕ್ಷಿತ ದಾಳಿಯಿಂದ ಸ್ವಲ್ಪ ವಿಚಲಿತರಾದರೂ ಸದಾನಂದರು ಪ್ರಸನ್ನವದರಾಗಿಯೇ ಇದ್ದರು. ಆದರೆ ತೀವ್ರ ಸಿಟ್ಟಿನಲ್ಲಿದ್ದ ಶೋಭಾ, ಅಲ್ರೀ ಗೌಡ್ರೇ 9 ತಿಂಗಳ ಹಿಂದೆ ಆಗಸ್ಟಿನಲ್ಲಿ ಸಿಎಂ ಕುರ್ಚಿಯಲ್ಲಿ ನಿಮ್ಮನ್ನೇ ಕುಳ್ಳರಿಸಬೇಕು ಎಂದು ಪಟ್ಟು ಹಿಡಿದಿದ್ದೇ ನಾನು. ಆದರೆ ಈಗೇನಾಗಿದೆ ನಿಮಗೆ ಎಂಬ ಧಾಟಿಯಲ್ಲಿ ತರಾಟೆಗೆ ತೆಗೆದುಕೊಳ್ಳತೊಡಗಿದರು. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎಂಬುದನ್ನು ಅರಿತ ಮುಖ್ಯಮಂತ್ರಿಗಳು, ನೀವು ಸಭೆಯಲ್ಲಿ ಇರೋ ಹಾಗಿದ್ದರೆ ಇರಿ ಇಲ್ಲಾಂದ್ರೆ ಎದ್ಹೋಗಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಯಾಕೋ ಏನೋ ಸರಿ ಹೋಗ್ತಿಲ್ಲ ಎಂಬುದನ್ನು ಗ್ರಹಿಸಿದ ಶೋಭಾ ಮೇಡಂ ಸಿಟ್ಟಿನಿಂದ ಸಭೆಯಿಂದ ಹೊರ ನಡೆದವರೇ ಸೀದಾ ಯಡಿಯೂರಪ್ಪನವರ ಎದುರು ಪ್ರತ್ಯಕ್ಷರಾಗಿದ್ದಾರೆ. ಚಾಚೂತಪ್ಪದೆ ವಿಷಯವನ್ನು ತಮ್ಮ ರಾಜಕೀಯ ಗುರುವಿನ ಕಿವಿಗೆ ಹಾಕಿದ್ದಾರೆ. ವಿಷಯ ತಿಳಿದ ಯಡಿಯೂರಪ್ಪನವರು ಮುಂದೆ ಆಡಿದ ಆಟವೇ ... 70 ಶಾಸಕರ ರಾಜೀನಾಮೆ ಪತ್ರ ಹಿಡಿದು ಬಿಜೆಪಿ ತೊರೆಯಲು... ಆ ಪ್ರಯತ್ನವಾಗಿಯೇ ಶೋಭಾ ದೆಹಲಿಗೆ ತೆರಳಿ ಅಹಮದ್ ಪಟೇಲ್ ಭೇಟಿಗಾಗಿ ಯತ್ನಿಸಿದ್ದು ಎನ್ನಲಾಗಿದೆ.












Click it and Unblock the Notifications