ಬಿಎಸ್‌ವೈ ಮನೆಯಲ್ಲಿ ಸಿಬಿಐಗೆ ಎಷ್ಟು ದುಡ್ಡು ಚಿನ್ನ ಸಿಕ್ತು?

ಇದು ಕೇವಲ ಒಬ್ಬ ಆಟೋ ಡ್ರೈವರ್ ಕುತೂಹಲಕ್ಕೆ ಕೇಳಿದ ಪ್ರಶ್ನೆಯಲ್ಲ. ಇಡೀ ರಾಜ್ಯದ ಜನತೆ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ನಿನ್ನೆ ಇಡೀ ದಿನ ಟಿವಿಗಳತ್ತ ಕಣ್ಣಿಟ್ಟು ನೋಡಿದ ಜನ ನಿರಾಶೆಯಾಗಿದ್ದಾರೆ. 'ಯಡಿಯೂರಪ್ಪ ಮನೆಯಲ್ಲಿ ಸಿಬಿಐನವರಿಗೆ ಚಿನ್ನ, ದುಡ್ಡು ಸಿಕ್ಲಿಲ್ವಂತೆ. ಬರೀ ಕಡತ ಕಂತೆಯಂತೆ' ಅಂತ ತಲೆಗೊಂದು ಮಾತನಾಡಿಕೊಳ್ಳುತ್ತಿದ್ದಾರೆ. 'ಹೋಗಲಿ ಬೆಳಗ್ಗೆಯೆದ್ದು ಪೇಪರ್ ನೋಡಿದರೆ ಆಯ್ತು. ಆಗ ಗೊತ್ತಾಗುತ್ತೆ' ಎಂದೂ ತಮ್ಮ ಕುತೂಹಲವನ್ನು ತಾತ್ಕಾಲಿಕವಾಗಿ ಮುಂದೂಡಿದ ಮಂದಿ ಚಿನ್ನದ ಕನಸಿನಲ್ಲಿ ನಿದ್ರೆಗೆ ಜಾರಿದ್ದಾರೆ.
ಆದರೆ ಬೆಳಗ್ಗೆ ಎದ್ದು ಭೂತಗನ್ನಡಿ ಹಿಡ್ಕೊಂಡು ನೋಡಿದರೂ ಪೇಪರಿನಲ್ಲಿ ಚಿನ್ನ ಕಣ್ಣಿಗೆ ಬಿದ್ದಿಲ್ಲ. ಹೋಗ್ಲಿ ಬಿಡು ಅತ್ಲಾಗೆ ಚಿನ್ನದ ರೇಟು 28 ಸಾವಿರಕ್ಕೆ ಬಿದ್ದುಹೋಗಿರುವಾಗ ಸಿಬಿಐ ನವರು ಅದನ್ನು ಯಡಿಯೂರಪ್ಪ ಮನೆಯಿಂದ ತೆಗೆದುಕೊಂಡು ಹೋಗಿಲ್ಲ ಎಂದು ಮಂದಿ ಸಮಾಧಾನ ಮಾಡಿಕೊಂಡಿದ್ದಾರೆ.
ಆದರೆ ಇಂತಹ ಪ್ರಸಂಗ ಯಾಕ್ಕಪ್ಪಾ ಉದ್ಭವವಾಯಿತು ಅಂದರೆ... ಇದೇ ಸಿಬಿಐ ಸೆಪ್ಟೆಂಬರ್ 5ರಂದು ನಾಡಿನ ಗಣಿ ಧನಿಯೊಬ್ಬರನ್ನು ಹಾಸಿಗೆಯಿಂದಲೇ ಎಬ್ಬಿಸಿಕೊಂಡು ಹೋಗಿತ್ತು. ಅಂದು ಬಳ್ಳಾರಿಯ ಅವರ ಮನೆಯಲ್ಲಿ ಸಿಕ್ಕ ಧನ-ಕನಕದ ವಿವರ ನೋಡಿ ಜನ ಬೆಚ್ಚಿಬಿದ್ದಿದ್ದರು. ಆ ಚಿನ್ನದ ಸಿಂಹಾಸನವೇನು, ಚಿನ್ನದ ಬಿಂದಿಗೆಗಳ ರಾಶಿಯೇನು?
ಸದ್ದಾಂ ಹುಸೇನ್ toilet ನಲ್ಲಿಯೂ ಚಿನ್ನದ್ದಾಗಿತ್ತು ಎಂಬುದನ್ನು ಜನ ಆಗ ನೆನಪು ಮಾಡಿಕೊಂಡಿದ್ದರು. ಅದೇ ನೆಪದಲ್ಲಿ/ನನಪಲ್ಲಿ ಇಂದು-ನಿನ್ನೆ ಯಡಿಯೂರಪ್ಪ ಮನೆಯಿಂದ ಹೊರಬಂದ ಸಿಬಿಐ ಅಧಿಕಾರಿಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದ್ದಾರೆ. ಆದರೆ ನೋಟಿನ ಕಂತೆ- ಚಿನ್ನದ ಬಿಂದಿಗೆಯಿರಲಿ ಕವಡೆಯಷ್ಟು ಸರಕನ್ನೂ ಮುಟ್ಟಿಲ್ಲ. ಬರೀ ಕಡತಾ ಕಾಂತಾ... ಕಡತ.












Click it and Unblock the Notifications