ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಶಾಸಕರ ರಾಜೀನಾಮೆ, ಅಂತಿಮ ಕದನ ಆರಂಭ

By Prasad
|
Google Oneindia Kannada News

Yeddyurappa supporters resign
ಬೆಂಗಳೂರು, ಮೇ. 12 : ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾಯಿಸಲೇಬೇಕು ಎಂದು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿಷ್ಠ ಶಾಸಕರು ರಾಜೀನಾಮೆ ಬಿಸಾಕಿದ್ದು, ಬಿಜೆಪಿಯಲ್ಲಿ ಭಿನ್ನಮತದ ಸುಂಟರಗಾಳಿ ಎದ್ದಿದೆ. ನಾಯಕತ್ವ ಬದಲಾವಣೆಯ ಗೊಂದಲವನ್ನು ಕೂಡಲೆ ಬಗೆಹರಿಸದಿದ್ದರೆ ವಿಧಾನಸಭೆ ಅವಧಿ ಮುಗಿಯುವುದರೊಳಗೆ ಚುನಾವಣೆ ಘೋಷಣೆಯಾಗುವುದು ಖಚಿತವಾಗಿದೆ.

ಯಡಿಯೂರಪ್ಪ ನಿಷ್ಠ ಶಾಸಕರಾದ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ವಿ ಸೋಮಣ್ಣ ಸೇರಿದಂತೆ 15 ಶಾಸಕರು ರಾಜ್ಯಪಾಲರು ಅಥವಾ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ರವಾನಿಸದೆ, ಯಡಿಯೂರಪ್ಪನವರಿಗೆ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಒತ್ತಡ ತಂತ್ರಕ್ಕೆ ಮಣಿಯದಿದ್ದರೆ ಪಕ್ಷದ ಸದಸ್ಯತ್ವಕ್ಕೇ ರಾಜೀನಾಮೆ ನೀಡಲು ಯಡಿಯೂರಪ್ಪ ಅಂತಿಮ ನಿರ್ಣಯ ತೆಗೆದುಕೊಂಡಿದ್ದಾರೆ ಎಂದೂ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸೇರಿಗೆ ಸವ್ವಾ ಸೇರು : ಆದರೆ, ಅಂತಿಮ ಕಾದಾಟಕ್ಕೆ ಸಿದ್ಧರಾಗೇ ಇರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಬೆಂಬಲಿಸುತ್ತಿರುವ ಬಣ, ಮೇ 13ರಂದು ನವದೆಹಲಿಗೆ ತೆರಳಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಸದಾನಂದ ಗೌಡರನ್ನು ಕೆಳಗಿಳಿಸಲು ಪ್ರಯತ್ನಿಸಿದರೆ, ತಾವು ಕೂಡ ರಾಜೀನಾಮೆ ನೀಡಿ ವಿಧಾನಸಭೆ ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧ ಎಂದು ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈಕಮಾಂಡಿಗೆ ರವಾನಿಸಿದ್ದಾರೆ.

ಆಂತರಿಕ ಭಿನ್ನಮತ ಉಲ್ಬಣವಾಗುತ್ತಿದ್ದಂತೆ ವಿದೇಶ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ನೇಪಾಳದಿಂದ ದಿಢೀರನೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಗರಕ್ಕೆ ಆಗಮಿಸಿದ ನಂತರ ಸದಾನಂದ ಗೌಡರೊಂದಿಗೆ ಚರ್ಚಿಸಿ ಮುಂದಿನ ನಡೆಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈಶ್ವರಪ್ಪ ಬೆಂಗಳೂರಿಗೆ ಬರುತ್ತಿದ್ದಂತೆ, ಭಾನುವಾರ ಸದಾನಂದ ಗೌಡರು ಕೂಡ ದೆಹಲಿಗೆ ತೆರಳಲಿದ್ದಾರೆ.

ಸದಾನಂದ ಗೌಡರಿಗೆ ಬೆಂಬಲವಾಗಿ ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ರಾಜುಕಾಗೆ ಮುಂತಾದವರು ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತನಾಡಿ, ಸದಾನಂದ ಗೌಡರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಮನವಿ ಮಾಡಿದ್ದಾರೆ. ಇವರ ಮನವಿಗೆ ಪ್ರಧಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಮತ್ತು ಕೆಲ ಸಚಿವರು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಸದಾನಂದ ಗೌಡ ಹೈಕಮಾಂಡಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಭಿನ್ನಮತ ಭುಗಿಲೆದ್ದಿದೆ. ಇದರ ಬಗ್ಗೆ ಚರ್ಚೆ ನಡೆಸಲು ಕೂಡಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಯಡಿಯೂರಪ್ಪ ಬಣ ಪಟ್ಟು ಹಿಡಿದಿದೆ. ಇದೇ ಸಂದರ್ಭದಲ್ಲಿ, ಭಿನ್ನಮತೀಯರೊಡನೆ ಮಾತನಾಡಿರುವ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

English summary
Crisis in Karnataka BJP has worsened further after 15 legislators supporting BS Yeddyurappa, who are demanding change in leadership have sent their resignation to BSY. The MLAs who are supporting DV Sadananda Gowda have clarified that they prefer to go to poll rather than change in leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X