ಸದಾನಂದರನ್ನು ಆ ಮಲೆಮಹದೇಶ್ವರನೇ ಕಾಪಾಡಿದ

dvs-drinks-distilled-water-malai-mahadeshwara-hills
ಚಾಮರಾಜನಗರ, ಏ.30: ರಾಜ್ಯ ಬರಗೆಟ್ಟು ಬೆಂಡಾಗಿರುವುದನ್ನು ಕಂಡು ಬೇಜಾರಾಗಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೀಗೇ ಲೋಕ ಸಂಚಾರ ಅಂತ ಹೊರಟಿದ್ದಾರೆ. ಹಾಗೆಂದೇ 'ನಾಡಿಗೆ ಒಳ್ಳೇದು ಮಾಡಪ್ಪಾ ತಂದೆ' ಎಂದು ಮೊನ್ನೆ ಶನಿವಾರ ಬೆಳಗ್ಗೆ ಮಹದೇಶ್ವರನಿಗೆ ಪೂಜೆ ಮಾಡಿಸಲು ಶುಕ್ರವಾರವೇ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಬೆಟ್ಟದ ಮೇಲಿನ ಸಾಲೂರು ಮಠದಲ್ಲಿ ವಾಸ್ತವ್ಯ ಹೂಡಿದ್ದರು.

ಆದರೆ ಅದೇನು ಎಡವಟ್ಟಾಯ್ತೋ ಅರಿವುಗೇಡಿ ಅವಸರಗೇಡಿ ಸಹಾಯಕನೊಬ್ಬ ಸಿಎಂ ಸಾಹೇಬರಿಗೆ ಕುಡಿಯಲು ನೀರು ತಗೊಂಬಾ ಅಂದರೆ ಸೀದಾ ಯುಪಿಎಸ್ ಬ್ಯಾಟರಿಯಿದ್ದ ಕೋಣೆಯೊಳಕ್ಕೆ ಹೋಗಿ ಬಿಸ್ಲೇರಿ ಬಾಟಲಿಯಲ್ಲಿದ್ದ ಡಿಸ್ಟಿಲ್ಡ್ ವಾಟರನ್ನೇ ತಂದು ಕೊಟ್ಟಿದ್ದಾನೆ.

ಇತ್ತ ಸನ್ಮಾನ್ಯ ಮುಖ್ಯಮಂತ್ರಿಗಳೋ ಆ ಕಡೆ ಈ ಕಡೆ ಜಮಾಯಿಸಿದ್ದ ಜನರನ್ನು ನೋಡುತ್ತಾ ಆ ಡಿಸ್ಟಿಲ್ಡ್ ವಾಟರನ್ನೇ ಎರಡು ಗುಟುಕು ಇಳಿಸಿದ್ದಾರೆ. ಅವರು ಕುಡಿಯುತ್ತಿರುವ ನೀರಿನ ಬಾಟಲಿ ಮೇಲೆ ಅದ್ಯಾಕೋ ಸ್ಥಳೀಯ ನಾಯಕರೊಬ್ಬರ ಕಣ್ಣುಬಿದ್ದಿದ್ದೇ ತಡ 'ಅಯ್ಯೋ ಮಹದೇಶ್ವರನೇ ಇದೇನಿದು ಅಪಚಾರ' ಎಂದು ಲಬಕ್ಕನೆ ಸಿಎಂ ಕೈಯಲ್ಲಿದ್ದ ವಾಟರ್ (ಡಿಸ್ಟಿಲ್ಡ್) ಬಾಟಲಿಯನ್ನು ಕಿತ್ತುಕೊಂಡಿದ್ದಾರೆ. ಅವರ ಪಕ್ಕದಲ್ಲೇ ಕುಳಿತು ಪತಿಯ ರೀತಿಯಲ್ಲೇ ಡಿಸ್ಟಿಲ್ಡ್ ವಾಟರನ್ನು ಕುಡಿದ ಡಾಟಿ ಅಮ್ಮಾವ್ರನ್ನೂ ಎಚ್ಚರಿಸಿದ್ದಾನೆ.

ರಾಜಕೀಯ ವಿಷಕಂಟ: 'ಅಷ್ಟೇಯಾ ಇನ್ನ' ಅಂತ ಎಲ್ಲರೂ ಆತಂಕಕ್ಕೊಳಗಾದರು. ತಕ್ಷಣ ಬೆಂಗಾವಲಿನಲ್ಲಿದ್ದ ವೈದ್ಯ ಮಹಾಶಯ, ಜಿಲ್ಲಾ ವೈದ್ಯ ಡಾ. ರಮೇಶ್ ಬಾಬು ಸೇರಿದಂತೆ ಎಲ್ಲರೂ ಸ್ಥಳಕ್ಕೆ ದೌಡಾಯಿಸಿ ಮುಖ್ಯಮಂತ್ರಿ ದಂಪತಿಗೆ ವೈದ್ಯೋಪಚಾರ ಮಾಡಿದ್ದಾರೆ. ಗಾಬರಿ ಪಡೋಂತಾದ್ದು ಏನೂ ಆಗಿಲ್ಲ ಅಂದಿದ್ದಾರೆ.

ಇತೀಚೆಗೆ ರಾಜಕೀಯ ವಿಷಕಂಟನಾಗಿರುವ ಸದಾನಂದ ಗೌಡರು ಡಿಸ್ಟಿಲ್ಡ್ ವಾಟರ್ ಕುಡಿದರೂ ಯಾವುದೇ ತೊಂದರೆಗೊಳಗಾಗಿಲ್ಲ. 'ಸದ್ಯ ಇಷ್ಟಕ್ಕೇ ಮುಗೀತಲ್ಲ. ಇನ್ನು ಈ ಕಡೆ ಅದರಲ್ಲೂ ಆ ಚಾಮರಾಜನಗರ ಕಡೆ ತಲೊಹಾಕೋದು ಬೇಡ' ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ, ಅಲ್ಲೇ ಒಂದರ್ಧ ಗಂಟೆ ಕುಳಿತು ಗಂಡಾಂತರ ನಿವಾರಿಸಿಕೊಂಡಿದ್ದಾರೆ.

ನಂತರ ಸಾವಕಾಶವಾಗಿ ಎದ್ದು ಮತ್ತೊಮ್ಮೆ ಕೊಳ್ಳೆಗಾಲದ ಮಲೆ ಮಹದೇಶ್ವರ ಸ್ವಾಮಿಗೆ ಕೈಮುಗಿದು, ಟಾಟಾ ಹೇಳಿ ರಾಜಧಾನಿಯತ್ತ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಅತ್ತ ಅಚಾತುರ್ಯವೆಸಗಿದ ಭದ್ರತಾ ಸಿಬ್ಬಂದಿ ಪಾಡೇನಾಯಿತು ಎಂಬುದು ತಿಳಿದುಬಂದಿಲ್ಲ. 'ಯಾರು ಎಷ್ಟೇ ಸಿಬ್ಬಂದಿಯಿದ್ದರೂ ಸ್ವತಃ ಮುಖ್ಯಮಂತ್ರಿಗಳೂ ಎಚ್ಚರವಹಿಸುವುದು ಒಳ್ಳೆಯದು. ಏಕೆಂದರೆ ಕಾಲ ಕೆಟ್ಹೋಗಿದೆ' ಎಂದು ಹಿರಿಯರೊಬ್ಬರು ಗೊಣಗಿದ್ದು ಅಲೆಅಲೆಯಾಗಿ ಬೆಟ್ಟದ ಮೆಲಿಂದ ತೇಲಿ ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+