ಮಣಪ್ಪುರಂ ಚಿನ್ನ ದರೋಡೆಕೋರರು ಸಿಕ್ಕಿಬಿದ್ದರು

ಜತೆಗೆ ಅವನ ಸಹಚರರಾದ ಮತ್ತು ಲೋಹೆಗಾಂವ್ ನಿವಾಸಿ ಸೋಮನಾಥ ರಘು ವಘಪುರೆ (26) ಮತ್ತು ಗುಲುಂಚೆ ಗ್ರಾಮದ ನಿವಾಸಿ ತೇಜಸ್ ರಾಜಾರಾಮ್ ಭೋಸಾಳೆ (31)ಯನ್ನು ಬಂಧಿಸಲಾಗಿದೆ. ಇತರ ಶಂಕಿತ ಆರೋಪಿಗಳಾದ ನಿತಿನ್ ಅಲಿಯಾಸ್ ಗೋತ್ಯಾ ಗಾಯಕ್ವಾಡ್ (25) ಅಖೀಲ್ ಅಲಿಯಾಸ್ ಮೊಹ್ಮಮದ್ ಅಂಬೇಡ್ಕರ್ (28) ತಲೆಮರೆಸಿಕೊಂಡಿದ್ದಾರೆ.
ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನ: ಬಂಧಿತರ ಸಂಬಂಧಿಕರ ಮನೆಯಲ್ಲಿ ಬಚ್ಚಿಡಲಾಗಿದ್ದ ರೂ. 3.35 ಕೋಟಿ ವೌಲ್ಯದ ಚಿನ್ನಾಭರಣ ಮಾಲು ಮತ್ತು ರೂ. 3.39 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸೋಮನಾಥನೇ ಈ ಕಳ್ಳತನದ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ.
'ದರೋಡೆ ನಡೆದ ರೀತಿ ಗಮನಿಸದಾಗ ಅದು ಸಂಸ್ಥೆಯ ಒಳಗಿನವರದೇ ಕೆಲಸ ಎಂಬುದು ಸ್ಪಷ್ಟವಾಗಿತ್ತು. ಪೊಲೀಸರು ಅದೇ ಜಾಡುಹಿಡಿದು ತನಿಖೆ ಆರಂಭಿಸಿದ್ದರು. ನಗರದ ಕ್ರೈಂ ಬ್ರಾಂಚ್ ಅಧಿಕಾರಿಗಳು ಒಬ್ಬೊಬ್ಬರಾಗಿ ಸಿಬ್ಬಂದಿಯನ್ನು ವಿಚಾರಣೆಗೆ ಗುರಿ ಪಡಿಸಿದಾಗ ಸೋಮನಾಥನ ಸುತ್ತ ಅನುಮಾನದ ಹುತ್ತ ಎದ್ದಿತ್ತು. ತನಿಖೆಯ ವೇಳೆ, ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ' ಎಂದು ಪೊಲೀಸ್ ಜಂಟಿ ಆಯುಕ್ತ ಸಂಜೀವ್ ಕುಮಾರ್ ಸಿಂಘಲ್ ಹೇಳಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ: ನಿಗೂಢ ದರೋಡೆ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಅಪರಾಧ ಪತ್ತೆ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ದೇಶ್‌ಮುಖ್ ನೇತೃತ್ವದ 20 ಪೊಲೀಸರ ತಂಡಕ್ಕೆ ಜಂಟಿ ಪೊಲೀಸ್ ಆಯುಕ್ತ ಸಂಜೀಲ್ ಸಿಂಘಾಲ್ 25 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ. ಈ ಕಳ್ಳತನ ಮಾಡಲು ವಘಪುರೆ ಎರಡು ತಿಂಗಳಿನಿಂದ ಸಂಚು ನಡೆಸಿದ್ದ ಎನ್ನಲಾಗಿದೆ.
ಪುಣೆ ಜಿಲ್ಲೆಯ ಪುರಂದರ್ ತಾಲೂಕಿನ ಕರ್ನಲ್‌ವಾಡಿ ಗ್ರಾಮದ ನಿವಾಸಿಯಾದ ಸೋಮನಾಥ, 2010ರಲ್ಲಿ ಲಂಡನ್‌ನಲ್ಲಿ ಉದ್ಯಮ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದನು. ತನ್ನ ಡಿಪ್ಲೊಮಾ ಮುಗಿಸಿದ ಬಳಿಕ ಆತ ಪುಣೆಗೆ ವಾಪಸಾಗಿದ್ದು. ಪುಣೆಗೆ ಆಗಮಿಸಿದ ಬಳಿಕ ಆತ ಮಣಪ್ಪುರಂ ಗೋಲ್ಡ್ ಲೋನ್ ಕಾರ್ಪೊರೇಶನ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕಾರ್ಯಾರಂಭಿಸಿದ್ದ. ಖಡಕಿ ಶಾಖೆಯಲ್ಲಿ ಆತ ಕಾರ್ಯ ನಿರ್ವಹಿಸುತ್ತಿದ್ದ. ಕೇವಲ ಏಳು ದಿನಗಳ ಹಿಂದೆಯಷ್ಟೇ ಆತ ಸಂಸ್ಥೆಯ ಭವಾನಿ ಪೇಟ್ ಶಾಖೆಗೆ ವರ್ಗಾವಣೆಗೊಂಡಿದ್ದ ಎಂದು ಸಿಂಘಲ್ ತಿಳಿಸಿದ್ದಾರೆ.












Click it and Unblock the Notifications