ದೀದಿ ರಾಜ್ಯದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಇದೆಲ್ಲ ನಡೆದಿರುವುದು, ವಿಶ್ವದ 100 ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದು ಟೈಮ್ಸ್ ಮ್ಯಾಗಜೀನ್‌ನಿಂದ ಗೌರವಕ್ಕೆ ಪಾತ್ರರಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ 'ಗೂಂಡಾ' ಕಾರ್ಯಕರ್ತರಿಂದ.
ಈ ಘಟನೆ ಏ.15ರಂದು ನಡೆದಿದೆಯಾದರೂ, ಏ.17ರಂದು ದೂರು ದಾಖಲಾಗಿದೆ ಮತ್ತು ಈ ಅಮಾನವೀಯ ಘಟನೆಯ ವಿವರಗಳನ್ನು ಪೊಲೀಸರು ನೀಡಿರುವುದು ಏ.18, ಬುಧವಾರದಂದು. ಈ ಗೂಂಡಾಗಿರಿಯನ್ನು ಎಸಗಿರುವುದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ 'ದೀದಿ' ಮಮತಾ ಬ್ಯಾನರ್ಜಿಯ ಪಕ್ಷದವರು.
ನಗುವೆಂದರೇನು ಎಂಬುದನ್ನೇ ಮರೆತಿರುವ ಮಮತಾ ಬ್ಯಾನರ್ಜಿ ಅವರು ಆಂಗ್ಲ ಪತ್ರಿಕೆಗಳನ್ನು ಓದಬಾರದು ಎಂದು ಫರ್ಮಾನು ಹೊರಡಿಸಿದ್ದರು. ನಂತರ ಸಿಪಿಎಂ ಪಕ್ಷದ ಯಾವುದೇ ವ್ಯಕ್ತಿಯನ್ನು ಮದುವೆಯಾಗಬಾರದು ಎಂದೂ ಆದೇಶಿಸಿದ್ದರು. ಈಗ ಮಹಿಳಾ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಮಹಿಳೆಯ ಮೇಲೆ ದಬ್ಬಾಳಿಕೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂದೆ ಕೋಲ್ಕತಾದಿಂದ 150 ಕಿ.ಮೀ. ದೂರದಲ್ಲಿರುವ ಕನಿಯಾದಿಗಿ ಎಂಬಲ್ಲಿ ವಾಸಿಸುತ್ತಿರುವ ಟೊಟೊನ್ ದಾಸ್ ಎಂಬುವವರು ದೂರು ದಾಖಲಿಸಿದ್ದಾರೆ. ತಮ್ಮ ತಾಯಿಯನ್ನು ಲೈಂಗಿಕವಾಗಿ ಹಿಂಸಿಸಿದರು ಎಂದು ದೂರಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಠ 21 ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ.
ಸಿಪಿಎಂ ಬೆಂಬಲಿಗರಾಗಿರುವ ಮಹಿಳೆಯನ್ನು ಗೂಂಡಾಗಳು ತೃಣಮೂಲ ಕಾಂಗ್ರೆಸ್ ಸಭೆಗೆ ಸ್ಥಳೀಯ ಹೆಂಗಸರನ್ನು ಕರೆತರಬೇಕೆಂದು ಆಗ್ರಹಿಸಿದ್ದಾರೆ. ಆಕೆ ನಿರಾಕರಿಸಿದಾಗ, ಉಟ್ಟ ಬಟ್ಟೆಯನ್ನು ಚಿಂದಿಚಿಂದಿ ಮಾಡಿ, 50 ಸಾವಿರ ರು. ನೀಡಬೇಕೆಂದು ಬಲವಂತ ಮಾಡಿದ್ದಾರೆ. ಮಹಿಳೆ ಮತ್ತು ಆಕೆಯ ಕುಟುಂಬದವರು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಆಕೆಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ದೂರಿದ್ದಾಳೆ.












Click it and Unblock the Notifications