ಕಡಿಮೆ ಅಂಕ ಗಳಿಸಿದ ಮಗಳಿಗೆ ಅಪ್ಪನ ಭಿಕ್ಷೆಯ ಶಿಕ್ಷೆ

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿರುವ 12 ವರ್ಷದ ಬಾಲಕಿ ಸೋಮವಾರ ರಾತ್ರಿ ಅವಮಾನ ತಾಳಲಾರದೆ ಅಳುತ್ತ ಕುಳಿತಿದ್ದಳು. ಇದನ್ನು ಗಮನಿಸಿದ ಸಮಾಜ ಸೇವಕಿ ಎಂ.ಪಿ. ವರ್ಷಾ ಎಂಬುವವರು ಆಕೆಯನ್ನು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಅವಮಾನದ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ನಿರ್ದಯಿ ಅಪ್ಪನನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಉದ್ರಿಕ್ತರಾದ ನೆರೆಹೊರೆಯವರು ಅಪ್ಪನ ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಮಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದ್ದು, ಅವರ ಸುಪರ್ದಿಯಲ್ಲೇ ಆಕೆ ಶಾಲೆಗೆ ಹೋಗುತ್ತಿದ್ದಾಳೆ.
ಮಗಳು ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಆಕೆಗೆ ಈ ಶಿಕ್ಷೆ ನೀಡಿದ್ದಾಗಿ ಅಪ್ಪ ಒಪ್ಪಿಕೊಂಡಿದ್ದಾನೆ. ಮಗಳು ಕಡಿಮೆ ಅಂಕ ಪಡೆದಿದ್ದರಿಂದ ತನ್ನ ಪ್ರತಿಷ್ಠೆಗೆ ಮುಕ್ಕಾಯಿತೆಂದು ಆತ ಹೇಳಿದ್ದಾನೆ. ಅಪ್ಪ, ಲೇಟಾಗಿ ಏಳುತ್ತಿದ್ದುದಕ್ಕೆ ಮತ್ತು ಕಡಿಮೆ ಅಂಕ ಗಳಿಸುತ್ತಿದ್ದುದಕ್ಕೆ ಪ್ರತಿದಿನ ಬೈಯುತ್ತಿದ್ದರು ಎಂದು ಮಗಳು ಹೇಳಿಕೆ ನೀಡಿದ್ದಾಳೆ.
ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕೆಂದು ಎಲ್ಲ ಪಾಲಕರೂ ಇಷ್ಟಪಡುತ್ತಾರೆ. ಆದರೆ, ಓದಿನಲ್ಲಿ ಹಿಂದೆ ಬಿದ್ದಿದ್ದಾಗ ಮತ್ತು ಪರೀಕ್ಷೆಯ ಸಮಯದಲ್ಲಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ಚೆನ್ನಾಗಿ ಓದುವಂತೆ ಉತ್ತೇಜಿಸುವ ಜವಾಬ್ದಾರಿಯೂ ಅಪ್ಪ ಅಮ್ಮನದಾಗಿರುತ್ತದೆ. ಅದು ಬಿಟ್ಟು ಭಿಕ್ಷೆ ಬೇಡುವಂತೆ ಶಿಕ್ಷೆ ನೀಡುವುದು ಯಾವ ನ್ಯಾಯ?












Click it and Unblock the Notifications