ರಾಮು-ರೆಡ್ಡಿ ಯಡ್ಡಿಗೆ ಕೊಟ್ಟ ಹಣದ ತನಿಖೆಗೆ ಆಗ್ರಹ

ಟಿವಿ9 ಬಹಿರಂಗಪಡಿಸಿರುವ ಈ ಸ್ಫೋಟಕ ವಿಷಯದಿಂದಾಗಿ ಶ್ರೀರಾಮುಲು ಮತ್ತು ಆಡಳಿತ ಪಕ್ಷದ ವಿರುದ್ಧ ಮುರಕೊಂಡು ಬಿದ್ದಿರುವ ವಿರೋಧ ಪಕ್ಷಗಳು, ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಆದಾಯ ತೆರಿಗೆ ಇಲಾಖೆಯಿಂದಲೂ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ಗದಗದಲ್ಲಿ ಶ್ರೀರಾಮುಲು ಅವರು 'ಸತ್ಯಶೋಧನೆ'ಗಾಗಿ ಎರಡು ದಿನಗಳ ಉಪಾವಾಸ ಕುಳಿತಿರುವ ಸಂದರ್ಭದಲ್ಲಿಯೇ, ಶ್ರೀರಾಮುಲು ಅವರು ಸ್ವಾಮೀಜಿ ಮುಂದೆ ಹೇಳಿದ ಈ 'ಸತ್ಯನಿವೇದನೆ'ಯ ವಿಡಿಯೋ ಬಹಿರಂಗವಾಗಿದೆ. ಸರಕಾರ ರಚನೆ ವೇಳೆಗೆ ಯಡಿಯೂರಪ್ಪನವರಿಗೆ ನಾನು ಮತ್ತು ಜನಾರ್ದನ ರೆಡ್ಡಿಯವರು ಕೇಳಿದಾಗಲೆಲ್ಲ ಹಣ ನೀಡಿದ್ದೇವೆ ಎಂದು ಶ್ರೀರಾಮುಲು ಸ್ವಾಮೀಜಿ ಮುಂದೆ ಹೇಳಿದ್ದರು.
"ಸತ್ಯಶೋಧನೆಗಾಗಿ ಉಪವಾಸ ಕುಳಿತಿರುವ ಶ್ರೀರಾಮುಲು ಅವರೇ ನೀವೇ ಹೇಳಿ ಸತ್ಯ ಏನೆಂದು" ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಇದು ಗೊತ್ತಿದ್ದ ಸಂಗತಿಯೆ, ಈಗ ಜಗಜ್ಜಾಹೀರಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
"ಶ್ರೀರಾಮುಲು ಯಡಿಯೂರಪ್ಪನವರಿಗೆ ಕೊಟ್ಟಿದ್ದಾರೆನ್ನಲಾದ 270 ಕೋಟಿ ರು. ನೀಡಿದ್ದಕ್ಕೆ ದಾಖಲೆಗಳು ಇವೆಯಾ? ಯಡಿಯೂರಪ್ಪ ಹಣ ಇಸಿದುಕೊಂಡಿದ್ದು ನಿಜಾನಾ? ಸ್ವಾಮೀಜಿಗಳೂ ಈ ಸಂಗತಿಯ ಬಗ್ಗೆ ಸತ್ಯಾಂಶ ಬಹಿರಂಗಪಡಿಸಬೇಕು. ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಸತ್ಯಸಂಗತಿ ಬೆಳಕಿಗೆ ಬರಬೇಕು" ಎಂದು ಕಾಂಗ್ರೆಸ್ ನಾಯಕ ಬಿಎಲ್ ಶಂಕರ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನ ನಾಯಕರಾದ ಜಾಫರ್ ಶರೀಫ್, ಜಿ ಪರಮೇಶ್ವರಪ್ಪ, ಸಿಎಂ ಇಬ್ರಾಹಿಂ ಮುಂತಾದವರು ಇದರ ತನಿಖೆ ನಡೆಸಲು ಡಿವಿ ಸದಾನಂದ ಗೌಡರು ಆದೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಈ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications