ಪೊಲೀಸ್ ಮೇಲೆ ದೂರಿತ್ತು ಬದುಕಲು ಸಾಧ್ಯವೇ?

ಜ್ಯೋತಿ ಅವರು ಹಿಂದಿದ್ದ ಎಸ್ ಪಿ ಅವರು ಪೋಲೀಸ್ ಕ್ವಾಟ್ರಸ್ ನಲ್ಲಿ ವಾಸಿಸಲು ನೀಡಿದ ಅನುಮತಿ ಪತ್ರವನ್ನು ತೋರಿಸಿದ ನಂತರ ಬಾಡಿಗೆ ಹಾಗೂ ದಂಡದ ಮೊತ್ತವನ್ನು 9,660 ರೂಪಾಯಿಗಳಿಗೆ ಇಳಿಸಿ ಇನ್ನೊಂದು ನೋಟೀಸ್ ನೀಡಿದ್ದಾರೆ.
ದೂರು ನೀಡಿದ್ದೇ ತಪ್ಪಾಯ್ತು: ಮೇಲಧಿಕಾರಿ ವಿರುದ್ದ ನೀಡಿದ ದೂರಿಗೆ ಪ್ರತಿಯಾಗಿ ಜ್ಯೋತಿ ಅವರಿಗೆ ಜಿಲ್ಲಾ ಪೋಲೀಸ್ ಅಧಿಕಾರಿಯಿಂದ ಈ ಉಡುಗೊರೆ ಸಿಕ್ಕರೆ, ಎಸ್ ಪಿ ಅವರು ಕರ್ತವ್ಯ ನಿರ್ಲಕ್ಷ್ಯ ಆರೋಪದಡಿಯಲ್ಲಿ ಜ್ಯೋತಿ ಅವರ ಒಂದು ವರ್ಷದ ಇನ್ ಕ್ರಿಮೆಂಟ್ ನ್ನು ತಡೆ ಹಿಡಿದು ಆದೇಶ ಹೊರಡಿಸಿದ್ದಾರೆ.
ಈ ಮಧ್ಯೆ ಜ್ಯೋತಿ ಅವರನ್ನು ಶನಿವಾರಸಂತೆ ಠಾಣೆಗೆ ಕಳುಹಿಸಲಾಯಿತು. ಇನ್‌ಕ್ರಿಮೆಂಟ್ ತಡೆ ಆದೇಶದ ವಿರುದ್ದ ಐಜಿಪಿ ಅವರಿಗೆ ಮೇಲ್ಮನವಿ ಸಲ್ಲಿಸಿದ ಜ್ಯೋತಿ ಅವರ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ಐಜಿಪಿ ಇನ್ಸ್ ಪೆಕ್ಟರ್ ಅವರ ಆದೇಶವನ್ನು ರದ್ದು ಪಡಿಸಿದ್ದಾರೆ.
ಜ್ಯೋತಿ ಅವರು ನೀಡಿದ್ದ ಇನ್ನೊಂದು ದೂರಿನ ವಿಚಾರಣೆ ನಡೆಸಿದ ಐಜಿಪಿ ವಿವಾಹಿತ ಮಹಿಳೆಯ ಸಾಂಸಾರಿಕ ಜೀವನದಲ್ಲಿ ಧಕ್ಕೆಯಾಗುವಂತೆ ವರ್ತಿಸಿದ ಆರೋಪದಡಿಯಲ್ಲಿ ಇನ್ಸ್‌ಪೆಕ್ಟರ್ ಅವರ 6 ತಿಂಗಳ ಇನ್‌ಕ್ರಿಮೆಂಟ್ ನ್ನು ತಡೆ ಹಿಡಿದು ದಿನಾಂಕ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ವಿರುದ್ದ ಡಿಜಿಪಿ ಅವರಿಗೆ ಮೇಲ್ಮನವಿ ಸಲ್ಲಿಸಿರುವ ಇನ್ಸ್‌ಪೆಕ್ಟರ್ ಕೆಲ ತಿಂಗಳ ಮೊದಲು ಜ್ಯೋತಿ ಅವರಿಗೆ ತಲೆ ಬುಡ ಇಲ್ಲದ ಸುಮಾರು 70-80 ಮೆಮೊಗಳನ್ನೂ ನೀಡಿದ್ದಾರೆ. ಅಲ್ಪಾವಧಿಯಲ್ಲಿ ಅತ್ಯಂತ ಹೆಚ್ಚು ಮೆಮೊಗಳನ್ನು ನೀಡಿದ ದಾಖಲೆ ಇವರದ್ದಾಗಿದೆ.
ಪೋಲೀಸ್ ಕ್ವಾಟ್ರಸ್ ತೆರವುಗೊಳಿಸುವಂತೆ ಇನ್ಸ್ ಪೆಕ್ಟರ್ ಹಾಗೂ ಎಸ್ ಪಿ ಅವರು ನೀಡಿದ ಆದೇಶದ ವಿರುದ್ದ ಜ್ಯೋತಿ ಅವರು ರಾಜ್ಯ ಹೈ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ವಿಚಾರಣೆ ನಡೆಸುತ್ತಿದೆ. ಇದೂ ಕೂಡ ಜಿಲ್ಲಾ ಪೋಲೀಸ್ ಇಲಾಖೆಯ ಇತಿಹಾಸದಲ್ಲೇ ದಾಖಲೆಯೇ ಆಗಿದೆ.
ನೆರವಿಗೆ ಬಂದ ಆರ್ ಟಿಐ : ವಸತಿ ಗೃಹದಲ್ಲೇ ಉಳಿದಿರುವ ಕುರಿತು ಜ್ಯೋತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಇನ್ಸ್ ಪೆಕ್ಟರ್ ಅವರಿಗೆ ಅರ್ಜಿ ಸಲ್ಲಿಸಿದಾಗ ಪ್ರತೀ ಪ್ರಶ್ನೆಗೂ ತಲಾ 10 ರೂಪಾಯಿಗಳ ಪೋಸ್ಟಲ್ ಆರ್ಡರ್ ನ್ನು ಲಗತ್ತಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವಂತೆ ಹಿಂಬರಹ ನೀಡಿದ್ದಾರೆ.
ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ನೀಡದಿರುವುದೂ ಕಾನೂನಿನ ಉಲ್ಲಂಘನೆ ಎಂಬ ಕನಿಷ್ಟ ಜ್ಞಾನವೂ ಈ ಇನ್ಸ್‌ಪೆಕ್ಟರ್ ಅವರಿಗೆ ಇದ್ದಂತಿಲ್ಲ. ಈ ಅಧಿಕಾರಿ ಈ ಹಿಂದೆ ಕರ್ತವ್ಯ ನಿರ್ವಹಿಸುತಿದ್ದಾಗಲೂ 2-3 ಬಾರಿ ಅಮಾನತಿಗೊಳಗಾಗಿದ್ದಾರೆ ಎಂದೂ ಹೇಳಲಾಗಿದೆ.
ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಹಿರಿಯ ಪೋಲೀಸ್ ಅಧಿಕಾರಿಗಳು ಈ ಇನ್ಸ್‌ಪೆಕ್ಟರ್ ನ್ನು ಅಮಾನತುಗೊಳಿಸದಿರುವದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಲೈಂಗಿಕ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತವೇ ಹೌದು.












Click it and Unblock the Notifications