ಡಿಕೆಶಿ ತಲೆಮೇಲೆ 183 ಕೋಟಿ ರೂ ಭೂಚಕ್ರ

ಇಂದಿರಾನಗರದ ಸಮೀಪ ಬೆನ್ನಿಗಾನಹಳ್ಳಿಯಲ್ಲಿ ಸರ್ವೆ ನಂಬರ್ 20ರ 4.20 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ, ಅಬ್ರಹಾಂ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಖಾಸಗಿ ದೂರು ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಲವು ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಅಬ್ರಹಾಂ, 4.20 ಎಕರೆ ಭೂಮಿಯನ್ನು ಕಾನೂನಿಗೆ ವಿರುದ್ಧವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪರಿಣಾಮವಾಗಿ ಸರ್ಕಾರಕ್ಕೆ 183 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ಕೋರಿದ್ದಾರೆ. ದೂರನ್ನು ವಿಚಾರಣೆಗೆ ಸ್ವೀಕರಿಸುವ ಸಂಬಂಧ ಬುಧವಾರ ಆದೇಶ ಹೊರಡಿಸುವುದಾಗಿ ಪ್ರಕಟಿಸಿದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್, ವಿಚಾರಣೆಯನ್ನು ಮುಂದೂಡಿದರು.
ದೂರಿನ ಸಾರಾಂಶ: ಎನ್‌ಜಿಇಎಫ್ ಬಡಾವಣೆ ನಿರ್ಮಾಣಕ್ಕಾಗಿ ಬೆನ್ನಿಗಾನಹಳ್ಳಿಯ ಬಿ.ಕೆ.ಶ್ರೀನಿವಾಸನ್ ಅವರ 4.20 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1986ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಭೂಮಿ ಬಿಡಿಎ ಸ್ವಾಧೀನದಲ್ಲಿರುವಾಗಲೇ 2003ರಲ್ಲಿ ಶಿವಕುಮಾರ್ ಅದನ್ನು ಖರೀದಿಸಿದ್ದರು. ಖರೀದಿ ಸಂದರ್ಭದಲ್ಲಿ ಸಚಿವರಾಗಿದ್ದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ದೂರಿನಲ್ಲಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಶಿವಕುಮಾರ್ ಅವರು ಶ್ರೀನಿವಾಸನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಬೆನ್ನಿಗಾನಹಳ್ಳಿಯ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ ಯಡಿಯೂರಪ್ಪ, 4.20 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು 2010ರ ಮೇ 13ರಂದು ಆದೇಶ ಹೊರಡಿಸಿದ್ದರು.
ಅರ್ಜಿ ಸಲ್ಲಿಸುವಾಗಲೇ ಶ್ರೀನಿವಾಸನ್ ಮೃತರಾಗಿದ್ದರು. ಈ ಸಂಗತಿಯನ್ನು ಮುಚ್ಚಿಟ್ಟು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ದೂರಿದ್ದಾರೆ. ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮುನ್ನವೇ ಅಲ್ಲಿ ಜಂಟಿ ಪಾಲುದಾರಿಕೆ ಯೋಜನೆಗಾಗಿ ರಿಯಲ್ ಎಸ್ಟೇಟ್ ಕಂಪನಿ ಜೊತೆ ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದರು. ಕಾನೂನುಬಾಹಿರ ಆದೇಶ ಪಡೆಯುವ ಸಂಚು ಮೊದಲೇ ನಡೆದಿತ್ತು ಎಂಬುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ ಎಂದು ಅಬ್ರಹಾಂ ಆರೋಪಿಸಿದ್ದಾರೆ.












Click it and Unblock the Notifications