ಸದನದಲ್ಲಿ ಖಾಸಗಿ ಟಿವಿ ನಿಷೇಧ ಊಹಾಪೋಹ : ಸುರೇಶ್

ಈ ಕುರಿತಂತೆ ಬುಧವಾರ ಹೇಳಿಕೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು, ಮಾಧ್ಯಮಗಳ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯಾವ ಪ್ರಯತ್ನವನ್ನೂ ಸರಕಾರ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಮಂತ್ರಿಗಳಿಬ್ಬರು ಅಶ್ಲೀಲ ವಿಡಿಯೋ ತುಣುಕನ್ನು ನೋಡಿದ್ದನ್ನು ಖಾಸಗಿ ಟಿವಿ ಚಾನಲ್ ಚಿತ್ರಿಸಿ, ತನ್ನ ಚಾನಲ್ಲುಗಳಲ್ಲಿ ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಖಾಸಗಿ ಚಾನಲ್ಲುಗಳನ್ನು ವಿಧಾನಸಭೆಯಲ್ಲಿ ನಿಷೇಧಿಸುವ ಕ್ರಮವನ್ನು ಸರಕಾರ ತೆಗೆದುಕೊಂಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ಮುದ್ರಿಸಲಾಗಿತ್ತು.
ಲೋಕಸಭೆಯಲ್ಲಿದ್ದಂತೆ ವಿಧಾನಸಭೆಯಲ್ಲಿಯೂ ಸರಕಾರಿ ಸ್ವಾಮ್ಯದ ಟಿವಿ ಚಾನಲ್ಲಿಗೆ ಮಾತ್ರ ಕಲಾಪಗಳನ್ನು ಚಿತ್ರಿಸುವ ಹಕ್ಕು ನೀಡಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದನ್ನು ಸುರೇಶ್ ಕುಮಾರ್ ಸಾರಾಸಗಟಾಗಿ ನಿರಾಕರಿಸಿದ್ದಾರೆ.











Click it and Unblock the Notifications