ಮಂತ್ರಿಗಳು ನೋಡಿದ ವಿಡಿಯೋಗೆ ಭಾರೀ ಬೇಡಿಕೆ

ರಾಜಕಾರಣಿಗಳ ಈ ದೊಂಬರಾಟದ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರ ಸಚಿವ ಸ್ಥಾನವನ್ನೇ ಕಿತ್ತುಕೊಳ್ಳಲಿ, ಶಾಸಕ ಸ್ಥಾನದಿಂದಲೇ ಕಿತ್ತುಬಿಸಾಡಲಿ ಅಥವಾ ಸರಕಾರವೇ ಬಿದ್ದುಹೋಗಲಿ. ಇದಾವುದರ ಬಗ್ಗೆಯೂ ಆಸಕ್ತಿಯಿಲ್ಲ. ಅದೆಲ್ಲವನ್ನು ಮೀರಿ ಈ ಶಾಸಕರು ನೋಡಿದ ವಿಡಿಯೋ ಯಾವುದು, ಎಲ್ಲಿ ದೊರೆಯುತ್ತದೆ, ಎಷ್ಟಕ್ಕೆ ದೊರೆಯುತ್ತದೆ ಎಂಬ ಬಗ್ಗೆ ಆಸಕ್ತಿ ಕೆರಳುತ್ತಿದೆ.
ಬೆಂಗಳೂರಿನಲ್ಲಿ ಸಿಡಿ ಅಂಗಡಿ ಇಟ್ಟ ವ್ಯಾಪಾರಿಗಳಿಗೆ ಇದು ಭಾರೀ ನೋವಾಗಿ ಪರಿಣಮಿಸಿದೆ. ಅನೇಕಾರು ಜನರು ಸವದಿ ನೋಡಿದ ವಿಡಿಯೋ ಸಿಡಿ ಸಿಗುತ್ತದಾ ಎಂದು ಕೇಳುತ್ತಿದ್ದಾರೆ. ಅದೆಲ್ಲೂ ಸಿಗದ ಕಾರಣ ವ್ಯಾಪಾರಿಗಳಿಗೆ ಪೀಕಲಾಟಕ್ಕೆ ಹಿಡಿದುಕೊಂಡಿದೆ. ಭಾರೀ ಬೇಡಿಕೆಯಿದ್ದರೂ ಪೂರೈಸಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಕಳೆದ ಕೆಲ ವರ್ಷಗಳವರೆಗೆ ಈ ಪರಿಯ ಬೇಡಿಕೆ ಎಂದೂ ಇರಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸಿಡಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಸ್ವಾಮೀಜಿಯೊಬ್ಬರ ರಾಸಲೀಲೆ ಘಟನೆ ಹೊರಬಿದ್ದಾಗ ಈ ಪರಿಯ ಬೇಡಿಕೆ ಹುಟ್ಟಿಕೊಂಡಿತ್ತು. ಇಂಟರ್ನೆಟ್‌ನಲ್ಲಿ ಕೂಡ ಈ ಎಂಎಂಎಸ್ ಲಭ್ಯವಿದೆ ಎಂಬ ಸುದ್ದಿ ಹರಡಿಕೊಳ್ಳುತ್ತಿದೆ. ಆದರೆ ಇಂಟರ್ನೆಟ್ಟಿನಲ್ಲಿ ಸಿಗದೆ ಡಿವಿಡಿ ರೂಪದಲ್ಲಿ ಸಿಕ್ಕರೆ ಅನುಕೂಲಕರ ಎಂದು ವ್ಯಾಪಾರಿಗಳು ಆಶಿಸುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಆ ಸಿಡಿಯಲ್ಲಿ ಇದ್ದ ಮಹಿಳೆ ಯಾರು ಎಂಬ ಕುರಿತು ಕೂಡ ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ಮಹಿಳೆ ಕೇರಳದವಳಿರಬಹುದೆಂದು ಕೂಡ ಮಾತು ಕೇಳಿಬರುತ್ತಿದೆ. ಪಡ್ಡೆಗಳು ಮಾತ್ರ ಚಾತಕ ಪಕ್ಷಿಗಳಂತೆ ಈ ಡಿವಿಡಿಗಾಗಿ ಕಾದು ಕುಳಿತಿರುವುದಂತು ಸತ್ಯ. ಏನೇ ಆಗಲಿ ಪೊಲೀಸರು ಮಾತ್ರ ಒಂದು ಕಣ್ಣಿಟ್ಟಿರಬೇಕು, ಯಾರ ಕೈಗೂ ಸಿಗದಂತೆ ಕ್ರಮ ಕೈಗೊಳ್ಳಬೇಕು.












Click it and Unblock the Notifications