ಶ್ರೀರಾಮುಲು ಮುಖ್ಯಮಂತ್ರಿ ಆಗಲಿ : ಸೋಮಶೇಖರ ರೆಡ್ಡಿ
ಹೊಸಪೇಟೆಯಲ್ಲಿ ಸೋಮವಾರ ಉದ್ಘಾಟನೆಯಾದ ಬಿ ಶ್ರೀರಾಮುಲು ಅಭಿಮಾನಿಗಳ ಸಂಘವನ್ನು ಉದ್ಧಾಟಿಸಿ ಮಾತನಾಡಿದ ಸೋಮಶೇಖರ ರೆಡ್ಡಿ, ಬಿಜೆಪಿ ನಾಯಕರ ಬಾಯಿಗೆ ಬಿಸಿಬಿಸಿ ಹಾಲನ್ನು ಸುರಿದಿದ್ದಾರೆ. ಸೋಮಶೇಖರ ರೆಡ್ಡಿ ಮಾತಿಗೆ ಶ್ರೀರಾಮುಲು ಅವರ ತಂಗಿ ಬಳ್ಳಾರಿ ಸಂಸದೆ ಜೆ. ಶಾಂತಾ ಪ್ರತಿಧ್ವನಿಯಾಗಿದ್ದಾರೆ.
ಕರ್ನಾಟಕಕ್ಕೆ ಬೇಕಾಗಿರುವುದು ಎಸಿ ರೂಮ್‌ನಲ್ಲಿ ಕುಳಿತ ಮುಖ್ಯಮಂತ್ರಿಯಲ್ಲ. ಬಡವರ ಕಷ್ಟಗಳನ್ನು ಅರಿತು ಪರಿಹಾರ ದೊರಕಿಸಿಕೊಡುವ ವ್ಯಕ್ತಿ. ಅದನ್ನು ಮಾಡುವ ತಾಕತ್ತು ಶ್ರೀರಾಮುಲು ಅವರಿಗೆ ಮಾತ್ರ ಇದೆ ಎಂದು ಸೋಮಶೇಖರ ರೆಡ್ಡಿ ನುಡಿದಿದ್ದಾರೆ.
ಕೆಲ ತಿಂಗಳ ಹಿಂದೆ ಬಳ್ಳಾರಿ ಗ್ರಾಮೀಣ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲುವನ್ನು ಬೆಂಬಲಿಸಿದ್ದಕ್ಕಾಗಿ ಸೋಮಶೇಖರ ರೆಡ್ಡಿಗೆ ಬಿಜೆಪಿ ನೋಟೀಸ್ ಜಾರಿ ಮಾಡಲಾಗಿತ್ತು. ನಂತರ ಇವರೆಲ್ಲ ನಮ್ಮವರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ತಿಪ್ಪೆ ಸಾರಿದ್ದರು.
ಪ್ರಸ್ತುತ, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ, ಸದಾನಂದ ಗೌಡರ ನಡುವೆ ಸಾಕಷ್ಟು ಜಟಾಪಟಿ ನಡೆದಿದೆ. ಅವಕಾಶ ಕೊಟ್ಟರೆ ನಾನೂ ಯಾಕಾಗಬಾರದು ಎಂದು ಹಲವರು ಗರಿಗರಿ ಬಟ್ಟೆ ಹೊಲಿಸಿ ರೆಡಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿ, ಶ್ರೀರಾಮುಲು ಮುಖ್ಯಮಂತ್ರಿಯಾಗಲಿ ಎಂದು ಬಿಜೆಪಿಯನ್ನು ಮತ್ತೆ ಕೆಣಕಿದ್ದಾರೆ.