ಜಂಗಿ ಕುಸ್ತಿಗೆ ಬಳ್ಳಾರಿ ಗ್ರಾಮೀಣ ಅಖಾಡ ಸಿದ್ಧ

ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಸಹೋದರರ ಹೆಸರು ಬಂದನಂತರ, ಬಿಜೆಪಿ ನಾಯಕರು ಅವರನ್ನು ಅವಗಣಿಸಿಕ್ಕೆ ಬೇಸರಿಸಿಕೊಂಡಿದ್ದ ರೆಡ್ಡಿಗಳ ಬಂಟ ಶ್ರೀರಾಮುಲು ರಾಜೀನಾಮೆ ನೀಡಿದ್ದರಿಂದ ಈ ಉಪ ಚುನಾವಣೆ ಎದುರಾಗಿದೆ. ಅನವಶ್ಯಕವಾಗಿ ಮತ್ತೊಂದು ಚುನಾವಣೆಗೆ, ಮತ್ತೊಂದಿಷ್ಟು ಕೋಟಿ ಹಣ ಪೋಲಾಗಲು ಕಾರಣರಾದ ಶ್ರೀರಾಮುಲುವನ್ನು ಅದೇ ಜನತೆ ಮತ್ತೆ ಗೆಲ್ಲಿಸುವರೆ? ಫಲಿತಾಂಶ ಡಿ.4ರಂದು ದೊರೆಯಲಿದೆ.
ಬಳ್ಳಾರಿ ರಾಜಕೀಯ ಚದುರಂಗದಾಟದ ದಾಳಗಳನ್ನು ಬೆಂಗಳೂರಿನಲ್ಲಿದ್ದುಕೊಂಡೇ ಎಸೆಯುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಶ್ರೀರಾಮುಲುವನ್ನು ಬೆಂಬಲಿಸಿರುವುದು ಬಿಜೆಪಿಗೆ ಭಾರೀ ಹೊಡೆತ ನೀಡಬಹುದು. ಆದರೆ, ಮತ್ತೊಂದು ಚುನಾವಣೆಗೆ ಕಾರಣರಾಗಿದ್ದು ಋಣಾತ್ಮಕವಾಗಿಯೂ ಶ್ರೀರಾಮುಲು ವಿರುದ್ಧ ಹೋಗಬಹುದು.
ಎಲ್ಲ ನಾಯಕರು ಪ್ರಚಾರಕ್ಕಾಗಿ ಧುಮುಕಿದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಹಣ, ಹೆಂಡ, ಸೀರೆಗಳು ಹರಿದಾಡಿರುವುದು ಅಂತಿಮವಾಗಿ ನಿರ್ಣಾಯಕವಾಗಬಹುದು. ಜೆಡಿಎಸ್ ಜೊತೆ ಮೈತ್ರಿಯನ್ನು ಬಹಿರಂಗವಾಗಿಯೇ ಮಾಡಿಕೊಂಡಿರುವ ಶ್ರೀರಾಮುಲು ಗೆದ್ದರೆ ಕರ್ನಾಟಕದಲ್ಲಿ ಹೊಸ ರಾಜಕೀಯ ಶೆಕೆ ಆರಂಭವಾಗುವುದರಲ್ಲಿ ಸಂದೇಹವೇ ಇಲ್ಲ. ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಲು ರೆಡ್ಡಿ ಕೃಪಾಪೋಷಿತ ಶ್ರೀರಾಮುಲು ಗೆಲ್ಲಲೇಬೇಕಾಗಿದೆ.
ಒಂದು ವೇಳೆ ಸೋತರೆ ರೆಡ್ಡಿ ಸಹೋದರರಿಗೆ ಶಾಶ್ವತವಾಗಿ ರಾಜಕೀಯ ಗೋರಿ ತೋಡಲು ಬಿಜೆಪಿಗೆ ಆಯುಧ ಸಿಕ್ಕಂತಾಗುತ್ತದೆ. ಆದರೆ, ಕಳೆದ ಉಪ ಚುನಾವಣೆಗಳಲ್ಲೆಲ್ಲ ಸತತ ಸೋಲು ಕಂಡು ಕಂಗೆಟ್ಟಿರುವ ಕಾಂಗ್ರೆಸ್ ಗೆ ಗೆಲುವೇನಾದರೂ ದಕ್ಕಿದರೆ ಮುಳುಗುತ್ತಿರುವ ಮಾನವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗುತ್ತದೆ. ಮತದಾನ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಮತದಾರರ ಅಮೂಲ್ಯ ಮತಗಳು ರಾಜ್ಯದ ರಾಜಕೀಯದ ದಿಕ್ಕುದೆಸೆಗಳನ್ನು ಬದಲಿಸುವ ತಾಕತ್ತು ಹೊಂದಿವೆ.












Click it and Unblock the Notifications