ಸಚಿವ ಅಶೋಕರಿಂದ ಮತ್ತೊಂದು ಅಕ್ರಮ ಭೂ ಮಾರಾಟ

ಕೊಡಿಗೆಹಳ್ಳಿಯ ಲೋಕ ಕಲ್ಯಾಣ ಪ್ರತಿಷ್ಠಾನಕ್ಕೆ ಸೇರಿರುವ ಜಮೀನನ್ನು ಅಶೋಕ್ ಅವರ ಅಕ್ಕನ ಮಕ್ಕಳ ಹೆಸರಿಗೆ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಸೇಲ್ ಡೀಡ್ ನನ್ನ ಬಳಿ ಇದೆ ನೋಡಿ ಎಂದು ಕಾನೂನು ವಿದ್ಯಾರ್ಥಿ ಕೆ.ಎನ್. ಜಗದೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ವಿವರಿಸಿದರು.
ಅಕ್ರಮದ ವಿವರ ಹೀಗಿದೆ: ಕೊಡಿಗೆ ಹಳ್ಳಿಯ ಸಮೀಪದ 7.9 ಎಕರೆ ಭೂಮಿಯನ್ನು ಬಿಡಿಎ 1987ರಲ್ಲಿ ಲೋಕ ಕಲ್ಯಾಣ ಪ್ರತಿಷ್ಠಾನಕ್ಕೆ ಮಂಜೂರು ಮಾಡಿತ್ತು. 2003ರಲ್ಲಿ ಶಾಸಕರಾಗಿದ್ದ ಆರ್.ಅಶೋಕ್, ದಾಖಲೆಗಳನ್ನು ತಿರುಚಿದ್ದಾರೆ. ನಕಲಿ ಕ್ರಯ ಪತ್ರ ಸೃಷ್ಟಿಸಿ, ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿದ್ದಾರೆ.
ನಂತರ ತನ್ನ ಅಕ್ಕನ ಮಕ್ಕಳಾದ ಮಾರುತೇಶ್, ವಿನೋದ್ ಮತ್ತು ಪ್ರಶಾಂತ್‌ಗೆ ಅದನ್ನು ಪರಭಾರೆ ಮಾಡಿದ್ದಾರೆ. ಯಾವುದೇ ಚಾರಿಟಬಲ್ ಟ್ರಸ್ಟ್‌ಗೆ ಸೇರಿದ ಜಮೀನಿನ ದಾಖಲೆಗಳನ್ನು ತಿರುಚುವುದು, ಭೂಮಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಜಗದೀಶ್ ವಿವರಿಸಿದರು.
ಈ ಭೂ ಹಗರಣದಲ್ಲಿ ಕಾಂಗ್ರೆಸ್ ನಾಯಕ ಕೆ.ಎನ್. ಚಕ್ರಪಾಣಿಯವರ ಬೆಂಬಲಿಗರಾದ ಕೆಂಪಣ್ಣ ಹಾಗೂ ರಾಜಾ ಎಂಬವರೂ ಶಾಮೀಲಾಗಿದ್ದಾರೆ. ಈ ಅವ್ಯವಹಾರವನ್ನು 2007ರಲ್ಲಿ ರಾಜ್ಯಪಾಲರ ಗಮನಕ್ಕೆ ತಂದಾಗ, ಅವರ ಆದೇಶದಂತೆ ಜಿಲ್ಲಾಧಿಕಾರಿ ತನಿಖೆ ನಡೆಸಿದ್ದರು. ಆದರೆ, ತನಿಖೆ ಸ್ಥಗಿತಗೊಂಡಿತ್ತು.












Click it and Unblock the Notifications